ಹೈದರಾಬಾದ್ : ನಗರದಲ್ಲಿ ಮಹಿಳೆಯರು ರಾತ್ರಿ ವೇಳೆ ಎಷ್ಟು ಸುರಕ್ಷಿತವಾಗಿದ್ದಾರೆ ಎಂಬುದನ್ನು ಪರೀಕ್ಷಿಸಲು ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಸಾಮಾನ್ಯ ಉಡುಪಿನಲ್ಲಿ (ಸಿವಿಲ್ ಡ್ರೆಸ್) ತಡರಾತ್ರಿ ರಸ್ತೆಗಿಳಿದಿದ್ದರು. ಯಾವುದೇ ಭದ್ರತೆ ಇಲ್ಲದೆ ಒಂಟಿಯಾಗಿ ಓಡಾಡುತ್ತಿದ್ದ ಈ ಅಧಿಕಾರಿಯನ್ನು ಸಾಮಾನ್ಯ ಮಹಿಳೆ ಎಂದು ಭಾವಿಸಿದ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾರೆ.
ಕೇವಲ ಒಂದೇ ರಾತ್ರಿಯ ಕಾರ್ಯಾಚರಣೆಯಲ್ಲಿ ಸರಿಸುಮಾರು 40 ಮಂದಿ ಪುರುಷರು ಈ ಮಹಿಳಾ ಅಧಿಕಾರಿಗೆ ಚುಡಾಯಿಸುವುದು, ಹಿಂಬಾಲಿಸುವುದು ಮತ್ತು ಕಿರುಕುಳ ನೀಡುವಂತಹ ಕೃತ್ಯಗಳನ್ನು ಎಸಗಿದ್ದಾರೆ. ಒಂಟಿ ಮಹಿಳೆ ಕಂಡೊಡನೆ ಕಾಮದ ದೃಷ್ಟಿಯಿಂದ ನೋಡುವ ಕಿಡಿಗೇಡಿಗಳ ಅಸಲಿ ಬಣ್ಣ ಈ ರಿಯಾಲಿಟಿ ಚೆಕ್ ಮೂಲಕ ಬಯಲಾಗಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಯು ತಮಗೆ ಕಿರುಕುಳ ನೀಡಿದವರನ್ನು ಗುರುತಿಸಿ, ಹಿಂಬಾಲಿಸುತ್ತಿದ್ದ ಪೊಲೀಸ್ ತಂಡದ ಸಹಾಯದೊಂದಿಗೆ 40 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ಮತ್ತಷ್ಟು ಬಿಗಿ ಬಂದೋಬಸ್ತ್ ಮಾಡಲು ಈ ಘಟನೆ ಪ್ರೇರಣೆಯಾಗಿದೆ.

