ಕನೌಜ್ : ಕನೌಜ್ ಜಿಲ್ಲೆಯ ಮದರಸಾದಲ್ಲಿ ಕಲಿಯುತ್ತಿದ್ದ 14 ವರ್ಷದ ಬಾಲಕಿ ಮೇ 3ರಂದು ಬೆಳಿಗ್ಗೆ 8 ಗಂಟೆಗೆ ಅಗತ್ಯ ವಸ್ತು ಖರೀದಿಸಲು ಹೊರಬಂದಾಗ ದೀಪು ಎಂಬಾತ “ನಿನ್ನ ತಾಯಿ ಕರೆಯುತ್ತಿದ್ದಾರೆ” ಎಂದು ನಂಬಿಸಿ ಅಪಹರಿಸಿದ್ದಾನೆ. ನಂತರ ಆಕೆಯನ್ನು ತನ್ನ ಮನೆಗೆ ಎಳೆದೊಯ್ದು ಎರಡು ದಿನಗಳ ಕಾಲ ಕೂಡಿಹಾಕಿದ್ದಾನೆ.
ಆರೋಪಿ ದೀಪು, ತನ್ನ ಸಹೋದರ ಸಂಜೀವ್ ಮತ್ತು ಸ್ನೇಹಿತ ಧೀರಜ್ ಜೊತೆ ಸೇರಿ ಬಾಲಕಿಗೆ ಸಾಫ್ಟ್ ಡ್ರಿಂಕ್ ಹೆಸರಿನಲ್ಲಿ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಆಕೆಯ ಹಣೆಗೆ ಸಿಂಧೂರ ಹಚ್ಚಿ, ಪಾದಗಳಿಗೆ ಬಣ್ಣ ಹಚ್ಚುವ ಮೂಲಕ ನಕಲಿ ಮದುವೆಯ ನಾಟಕವಾಡಿ ವಿಕೃತಿ ಮೆರೆದಿದ್ದಾರೆ.
ಮಂಗಳವಾರ ಮಧ್ಯಾಹ್ನ ಬಾಲಕಿ ಹೇಗೋ ಮೊಬೈಲ್ ಪಡೆದು ತನ್ನ ತಾಯಿಗೆ ಕರೆ ಮಾಡಿ “ನನ್ನನ್ನು ಕಟ್ಟಿಹಾಕಿದ್ದಾರೆ, ಬಂದು ಉಳಿಸಿ” ಎಂದು ವಿಳಾಸ ನೀಡಿದ್ದಾಳೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೋಷಕರು ಮತ್ತು ಪೊಲೀಸರು, ದೀಪು ಎಂಬಾತನ ಮನೆಯ ತಾರಸಿಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಟ್ಟಿಹಾಕಲ್ಪಟ್ಟಿದ್ದ ಬಾಲಕಿಯನ್ನು ರಕ್ಷಿಸಿದ್ದಾರೆ.
ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸಂತ್ರಸ್ತೆಯ ತಂದೆಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ದೀಪು ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

