ಚೆನ್ನೈ : ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ಅವರ ಟಿವಿ ಕೆ (TVK) ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಕ್ರಮವನ್ನು ಖಂಡಿಸಿ ತಮಿಳುನಾಡು ಕಾಂಗ್ರೆಸ್ (TNCC) ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಚೆನ್ನೈನ ಅಣ್ಣಾ ಸಲೈನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಸಿಸಿ ಉಸ್ತುವಾರಿ ಗಿರೀಶ್ ಚೋಡಂಕರ್, ರಾಜಭವನವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಚೋಡಂಕರ್, “ರಾಜ್ಯಪಾಲರಿಗೆ ಸಂವಿಧಾನ ರಕ್ಷಿಸುವ ಮಿಷನ್ ಇರಬೇಕು, ಆದರೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶಗಳನ್ನು ಪಾಲಿಸುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು. 108 ಸ್ಥಾನ ಗೆದ್ದಿರುವ ಟಿವಿ ಕೆ ಮತ್ತು 5 ಸ್ಥಾನ ಗೆದ್ದಿರುವ ಕಾಂಗ್ರೆಸ್ ಮೈತ್ರಿಗೆ ಸರ್ಕಾರ ರಚಿಸಲು ಅವಕಾಶ ನೀಡದೆ ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಇನ್ನೊಂದೆಡೆ, ವಿಜಯ್-ಕಾಂಗ್ರೆಸ್ ಮೈತ್ರಿಯನ್ನು ಅಧಿಕಾರದಿಂದ ದೂರವಿಡಲು ದಶಕಗಳ ವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಒಟ್ಟಾಗಲಿವೆ ಎಂಬ ವದಂತಿಗಳ ಬಗ್ಗೆ ಉತ್ತರಿಸಿದ ಚೋಡಂಕರ್, “ಅವರು ಒಂದಾಗಲಿ, ಆಗ ಯಾರು ನಿಜವಾದ ಸೆಕ್ಯೂಲರ್ ಎಂಬುದು ಜನರಿಗೆ ತಿಳಿಯಲಿದೆ” ಎಂದಿದ್ದಾರೆ. ಸದ್ಯ ಟಿವಿ ಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಹುಮತ ಸಾಬೀತುಪಡಿಸಲು ಇನ್ನೂ 5 ಶಾಸಕರ ಕೊರತೆ ಇದ್ದು, ತಮಿಳುನಾಡು ರಾಜಕೀಯದ ಈ ಹೈಡ್ರಾಮಾ ಈಗ ದೆಹಲಿಯ ಅಂಗಳ ತಲುಪಿದೆ.
ಇದನ್ನು ಓದಿ : Koppala : ಹಿಂದೂ ಯುವತಿಯನ್ನು ಪ್ರೀತಿಸಿದಕ್ಕೆ ಮುಸ್ಲಿಂ ಯುವಕನ ಮೇಲೆ ಭೀಕರ ಹಲ್ಲೆ; ಕಣ್ಣಿಗೆ ಬಟ್ಟೆ ಕಟ್ಟಿ ಅಪಹರಿಸಿ ಪ್ರಾಣ ಬೆದರಿಕೆ!

