Monday, May 11, 2026
Homeತಾಜಾ ಸುದ್ದಿTamil Nadu : "ರಾಜ್ಯಪಾಲರ ಅಗತ್ಯವಿಲ್ಲ" ಕನಿಮೋಳಿ ಕರುಣಾನಿಧಿ ಸ್ಫೋಟಕ ಹೇಳಿಕೆ ; ಡಿಎಂಕೆ-ಎಐಎಡಿಎಂಕೆ...

Tamil Nadu : “ರಾಜ್ಯಪಾಲರ ಅಗತ್ಯವಿಲ್ಲ” ಕನಿಮೋಳಿ ಕರುಣಾನಿಧಿ ಸ್ಫೋಟಕ ಹೇಳಿಕೆ ; ಡಿಎಂಕೆ-ಎಐಎಡಿಎಂಕೆ ಮೈತ್ರಿ ವದಂತಿಗೆ ತೆರೆ!

ಚೆನ್ನೈ : ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಬಗ್ಗೆ ಅನಿಶ್ಚಿತತೆ ಮುಂದುವರಿಯುತ್ತಿರುವ ನಡುವೆಯೇ, ಹಿರಿಯ ಡಿಎಂಕೆ ನಾಯಕಿ ಕನಿಮೋಳಿ ಕರುಣಾನಿಧಿ ಅವರು ರಾಜ್ಯಪಾಲರ ಹುದ್ದೆಯನ್ನೇ ರದ್ದುಪಡಿಸಬೇಕು ಎಂಬ ತಮ್ಮ ಪಕ್ಷದ ಹಳೆಯ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. “ರಾಜ್ಯಕ್ಕೆ ರಾಜ್ಯಪಾಲರ ಅಗತ್ಯವೇ ಇಲ್ಲ ಎಂಬುದು ಡಿಎಂಕೆಯ ಮೊದಲಿನಿಂದಲೂ ಇರುವ ನಿಲುವು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಅವರು ಪಿಟಿಐ (PTI) ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಈ ಬಾರಿ ತಮಿಳುನಾಡು ಜನರು ಯಾರಿಗೂ  “ಸ್ಪಷ್ಟ ಬಹುಮತ”  ನೀಡಿಲ್ಲ. ಇದೇ ಕಾರಣಕ್ಕೆ ರಾಜ್ಯದಲ್ಲಿ ಈಗಿನ ರಾಜಕೀಯ ಅಸ್ಥಿರತೆ ಮತ್ತು ಗೊಂದಲಗಳು ಸೃಷ್ಟಿಯಾಗಿವೆ. ಜನರ ತೀರ್ಪೇ ಅಂತಿಮ, ಅದನ್ನು ನಾವೆಲ್ಲರೂ ಗೌರವಿಸಬೇಕು. ಆದರೆ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದವರನ್ನು ಸರ್ಕಾರ ರಚಿಸಲು ಆಹ್ವಾನಿಸುವಲ್ಲಿ ರಾಜ್ಯಪಾಲರು ಮಾಡುತ್ತಿರುವ ವಿಳಂಬವು ಸಂವಿಧಾನದ ನೈತಿಕತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಕಿಡಿ ಕಾರಿದ್ದಾರೆ.

ದಶಕಗಳ ವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಒಂದಾಗಿ ಸರ್ಕಾರ ರಚಿಸಲು ಅಥವಾ ಹೊರಗಿನಿಂದ ಬೆಂಬಲ ನೀಡಲು ಮುಂದಾಗಿವೆ ಎಂಬ ವದಂತಿಗಳನ್ನು ಕನಿಮೋಳಿ ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ಇವೆಲ್ಲವೂ ಕೇವಲ ಊಹಾಪೋಹಗಳು ಮತ್ತು ಸುಳ್ಳು ಸುದ್ದಿಗಳು. ಪ್ರತಿ ವದಂತಿಗೂ ಪ್ರತಿಕ್ರಿಯಿಸಲು ನಾವು ತಯಾರಿಲ್ಲ” ಎಂದು ಅವರು ಹೇಳಿದ್ದಾರೆ. ಸದ್ಯ 108 ಸ್ಥಾನ ಗೆದ್ದಿರುವ ದಳಪತಿ ವಿಜಯ್ ಅವರ ಟಿವಿ ಕೆ (TVK) ಮತ್ತು ಕಾಂಗ್ರೆಸ್ ಮೈತ್ರಿಗೆ ಬಹುಮತದ ಕೊರತೆ ಇದ್ದು, ಡಿಎಂಕೆ (59) ಮತ್ತು ಎಐಎಡಿಎಂಕೆ (47) ಪಕ್ಷಗಳ ಮುಂದಿನ ನಡೆ ಕುತೂಹಲ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!