ದೀರ್ಘಕಾಲದಿಂದ ಕಾಯುತ್ತಿದ್ದ ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯಕ್ಕೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ಅಳಿಸುವಿಕೆ ಹಾಗೂ ವಿಳಾಸ ಬದಲಾವಣೆ ಮಾಡಲು ಇಂದಿನಿಂದಲೇ (ಮೇ 8, 2026) ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸಿದೆ. ಕುಟುಂಬಕ್ಕೆ ಹೊಸದಾಗಿ ಬಂದ ಸೊಸೆ, ನವಜಾತ ಶಿಶುವಿನ ಹೆಸರು ಸೇರ್ಪಡೆ ಮಾಡಲು ಹಾಗೂ ಮರಣ ಹೊಂದಿದವರ ಹೆಸರನ್ನು ತೆಗೆದುಹಾಕಲು ಸುದೀರ್ಘ ಕಾಲಾವಕಾಶವನ್ನು ನೀಡಲಾಗಿದೆ.
ಸಂಕ್ಷಿಪ್ತ ವಿವರ:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08-05-2026.
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 31-03-2027.
- ಹೊಸ ರೇಷನ್ ಕಾರ್ಡ್: ಸದ್ಯಕ್ಕೆ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
- ಅರ್ಜಿ ಸಲ್ಲಿಸುವ ಸ್ಥಳ: ಗ್ರಾಮ ಒನ್ (Grama One), ಕರ್ನಾಟಕ ಒನ್ (Karnataka One) ಮತ್ತು ಬೆಂಗಳೂರು ಒನ್ (Bangalore One) ಕೇಂದ್ರಗಳು ಮಾತ್ರ.
ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸಲು ಬರಲ್ಲ! : ಪಡಿತರ ಚೀಟಿಯ ತಿದ್ದುಪಡಿಗೆ ಸಂಬಂಧಿಸಿದಂತೆ ಆಹಾರ ಇಲಾಖೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಒಂದು ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‌ಗಳು, ಸ್ವಂತ ಮನೆ ಅಥವಾ ಸಾಮಾನ್ಯ ಸೈಬರ್ ಸೆಂಟರ್‌ಗಳ ಮೂಲಕ ನೇರವಾಗಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಯಾವುದೇ ಅವಕಾಶವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಗಮನಿಸಬೇಕಾದ ಪ್ರಮುಖ ಅಂಶಗಳು: ಸಾರ್ವಜನಿಕರು ತಮ್ಮ ಮೊಬೈಲ್, ಮನೆ ಅಥವಾ ಸೈಬರ್ ಸೆಂಟರ್‌ಗಳ ಮೂಲಕ ನೇರವಾಗಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಈ ಸೇವೆಯು ಕೇವಲ ಫೋಟೋ-ಬಯೋ ಸೆಂಟರ್‌ಗಳಾದ (Photo Bio Center) ಅಧಿಕೃತ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ಲಭ್ಯವಿದೆ. ಹೀಗಾಗಿ ತಿದ್ದುಪಡಿ ಮಾಡಿಸುವವರು ಕಡ್ಡಾಯವಾಗಿ ಈ ಕೇಂದ್ರಗಳಿಗೆ ಭೇಟಿ ನೀಡಬೇಕು.
ಹೊಸ ಕಾರ್ಡ್‌ಗೆ ಅವಕಾಶವಿಲ್ಲ : ಆಹಾರ ಇಲಾಖೆಯು ಇತ್ತೀಚೆಗೆ ರೇಷನ್ ಕಾರ್ಡ್ ಪ್ರಕ್ರಿಯೆಗಳನ್ನು ಆರಂಭಿಸಿದೆಯಾದರೂ, ಹೊಸದಾಗಿ ಪಡಿತರ ಚೀಟಿ ಪಡೆಯಲು ಬಯಸುವವರಿಗೆ ಸದ್ಯಕ್ಕೆ ಅವಕಾಶ ನೀಡಿಲ್ಲ. ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಈಗಿರುವ ಬಿಪಿಎಲ್ (BPL) ಹಾಗೂ ಎಪಿಎಲ್ (APL) ಕಾರ್ಡ್‌ಗಳ ತಿದ್ದುಪಡಿಗಾಗಿ ಮಾತ್ರ ಪೋರ್ಟಲ್ ತೆರೆಯಲಾಗಿದೆ.
ಬೇಕಾಗುವ ಪ್ರಮುಖ ದಾಖಲೆಗಳು:
- ಮೂಲ ರೇಷನ್ ಕಾರ್ಡ್ ಪ್ರತಿ.
- ಹೆಸರು ಸೇರಿಸಬೇಕಾದವರ ಆಧಾರ್ ಕಾರ್ಡ್ (Aadhaar Card) ಕಡ್ಡಾಯ.
- 5 ವರ್ಷದೊಳಗಿನ ಮಕ್ಕಳಾಗಿದ್ದರೆ ಜನನ ಪ್ರಮಾಣಪತ್ರ (Birth Certificate) ಹಾಗೂ ಆಧಾರ್.
- ಮದುವೆಯಾಗಿ ಬಂದ ಸೊಸೆಯ ಹೆಸರು ಸೇರಿಸಲು – ಹಳೆ ರೇಷನ್ ಕಾರ್ಡ್‌ನಿಂದ ಹೆಸರು ಕಡಿತಗೊಳಿಸಿದ ಪ್ರಮಾಣಪತ್ರ (NOC) ಹಾಗೂ ಆಧಾರ್ ಕಾರ್ಡ್.
- ಮರಣ ಹೊಂದಿದವರ ಹೆಸರು ತೆಗೆಯಲು – ಮರಣ ಪ್ರಮಾಣಪತ್ರ (Death Certificate).
- ತಿದ್ದುಪಡಿ ಮಾಡುವಾಗ ಕುಟುಂಬದ ಮುಖ್ಯಸ್ಥರ ಬಯೋಮೆಟ್ರಿಕ್ (ಬೆರಳಚ್ಚು) ಕಡ್ಡಾಯವಾಗಿರುತ್ತದೆ.
ಇದನ್ನು ಓದಿ : Suvendu Adhikari oath ceremony : ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ

