ಮಂಗಳೂರು : ಮಂಗಳೂರು ತಾಲೂಕಿನ ಬೈಕಂಪಾಡಿ ಗ್ರಾಮದ ಕುಡುಂಬೂರಿನಲ್ಲಿರುವ ‘ಪೂಜಾ ಮೊಬೈಲ್ಸ್’ ಎಂಬ ಅಂಗಡಿಯಲ್ಲಿ 2018ರಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿತ್ತು. ಕಳ್ಳರು ಸುಮಾರು 2,17,740 ರೂಪಾಯಿ ಮೌಲ್ಯದ ಮೊಬೈಲ್ ಫೋನ್ಗಳು, ಬಿಡಿಭಾಗಗಳು, ಸಿಸಿಟಿವಿ ಡಿವಿಆರ್ ಮತ್ತು ನಗದು ಹಣವನ್ನು ದೋಚಿದ್ದರು. ಅಷ್ಟೇ ಅಲ್ಲದೆ, ಅಂಗಡಿಯಲ್ಲಿದ್ದ 10 ಸಾವಿರ ರೂಪಾಯಿ ಮೌಲ್ಯದ ಎರಡು ಕಂಪ್ಯೂಟರ್ ಮೊನಿಟರ್ಗಳನ್ನು ಒಡೆದು ಹಾಕಿ ಹಾನಿ ಉಂಟುಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. ಸಂಖ್ಯೆ: 152/2018 ರಂತೆ ಪ್ರಕರಣ ದಾಖಲಾಗಿತ್ತು.
ಈ ಕಳವು ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅಸ್ಸಾಂ ಮೂಲದ ಪಾರೂಲ್ ಹುಸೈನ್ ಲಸ್ಕರ್ ಯಾನೆ ಪಾರೂಲ್, ಕಳೆದ ಆರು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದನು. ಈತನ ವಿರುದ್ಧ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿತ್ತು. ನಿರಂತರವಾಗಿ ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಆದರೆ ಆರೋಪಿಯು ಅಸ್ಸಾಂ ಮೂಲದವನಾಗಿದ್ದರೂ ಕಾಸರಗೋಡು ಭಾಗದಲ್ಲಿ ಅವಿತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು.
ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ಅವರ ಮಾರ್ಗದರ್ಶನದಲ್ಲಿ, ಸಿಬ್ಬಂದಿಗಳಾದ ನವೀನ ಚಂದ್ರ, ಸಯ್ಯದ್ ಇಂತಿಯಾಜ್, ರಾಕೇಶ್ ಮತ್ತು ವಿನಯ್ ಅವರು ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಬಳಿ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಮೇ 11, 2026 ರಂದು ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾದ ತಂಡವು, ಆತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಪೊಲೀಸರ ಈ ಚಾಣಾಕ್ಷತನಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನು ಓದಿ : PM Modi : ತೈಲ ಬೆಲೆ ಏರಿಕೆ ತಡೆಯಲು ಮೋದಿಯಿಂದ ಹೊಸ ‘ಡಿಜಿಟಲ್’ ಅಸ್ತ್ರ! ಶಾಲೆಗಳು ಇನ್ಮುಂದೆ ಆನ್ಲೈನ್?

