ಮಂಗಳೂರು : ತನ್ನ ಕಕ್ಷಿದಾರೆಯ ಪತಿಯಾದ ರಿಯಾಜ್ ಎಂಬಾತ ಕಳೆದ 9 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ದೌರ್ಜನ್ಯ ಮತ್ತು ಮಾನಸಿಕ ಹಿಂಸೆಯ ಕುರಿತು ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ನ್ಯಾಯವಾದಿ ಜೀಶನ್ ಅಲಿ ಅವರನ್ನು ಕಕ್ಷಿದಾರೆ ಭೇಟಿ ಮಾಡಿ ಚರ್ಚಿಸಿದ್ದರು. ಇದೇ ವಿಚಾರಕ್ಕೆ ಕೆರಳಿದ ರಿಯಾಜ್, ಕಾನೂನು ಸಲಹೆ ನೀಡುತ್ತಿದ್ದ ನ್ಯಾಯವಾದಿಯನ್ನೇ ಗುರಿಯಾಗಿಸಿಕೊಂಡು ಅವರ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದನು ಎನ್ನಲಾಗಿದೆ.
ಮೇ 11 ರಂದು ಸಂಜೆ ಸುಮಾರು 7 ಗಂಟೆಯ ವೇಳೆಗೆ, ನ್ಯಾಯವಾದಿ ಜೀಶನ್ ಅಲಿ ಅವರು ತಮ್ಮ ವೃತ್ತಿ ಕಾರ್ಯ ಮುಗಿಸಿ ಅತ್ತಾವರ ಪ್ರದೇಶದ ಮೂಲಕ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ರೌಡಿ ರಿಯಾಜ್, ಜೀಶನ್ ಅಲಿಯವರನ್ನು ಅಡ್ಡಗಟ್ಟಿದ್ದಾನೆ. ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಲ್ಲದೆ, ತಾನು ವಾಹನದಲ್ಲಿ ತಂದಿದ್ದ ಹರಿತವಾದ ಆಯುಧಗಳನ್ನು ಹೊರತೆಗೆದು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಅಲ್ಲಿದ್ದ ಸಾರ್ವಜನಿಕರು ತಕ್ಷಣ ಮಧ್ಯಪ್ರವೇಶಿಸಿ ರಿಯಾಜ್‌ನನ್ನು ತಡೆದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ನ್ಯಾಯವಾದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರೋಪಿ ರಿಯಾಜ್ ಒಬ್ಬ ಕುಖ್ಯಾತ ರೌಡಿ ಶೀಟರ್ ಆಗಿದ್ದು, ಈ ಹಿಂದೆಯೂ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿ ತಲವಾರು ಝಳಪಿಸಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ಆ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪ್ರಸ್ತುತ ನ್ಯಾಯವಾದಿ ಜೀಶನ್ ಅಲಿ ಮೇಲೆ ನಡೆಸಿರುವ ಹಲ್ಲೆ ಯತ್ನದ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕಾಗಿ ತನಿಖೆ ತೀವ್ರಗೊಳಿಸಿದ್ದಾರೆ.
ಇದನ್ನು ಓದಿ : Panambur : 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಸ್ಸಾಂ ಕಳ್ಳ ಕಾಸರಗೋಡಿನಲ್ಲಿ ಅರೆಸ್ಟ್!

