ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಮೇ 3ರಂದು ನಡೆದಿದ್ದ NEET-UG 2026 ಪರೀಕ್ಷೆಯನ್ನು ರದ್ದುಗೊಳಿಸಿರುವ ನಿರ್ಧಾರವು ದೇಶಾದ್ಯಂತ ಸಂಚಲನ ಮೂಡಿಸಿದ್ದು, ಈ ಬಗ್ಗೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲು ನಿರ್ಧರಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ಬದಲಾಗಿ ದೇಶದ ಯುವಜನತೆಯ ಭವಿಷ್ಯದ ವಿರುದ್ಧ ಎಸಗಿದ “ಸಂಘಟಿತ ಅಪರಾಧ” ಎಂದು ಬಣ್ಣಿಸಿದ್ದಾರೆ. ಭ್ರಷ್ಟ ಬಿಜೆಪಿ ಆಡಳಿತವು ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಅವರ ಜೀವನದ ಕನಸುಗಳನ್ನು ನುಚ್ಚುನೂರು ಮಾಡಿದೆ ಎಂದು ಅವರು ಕಿಡಿಕಾರಿದ್ದಾರೆ.
ವಿದ್ಯಾರ್ಥಿಗಳ ಹೋರಾಟದ ಹಾದಿಯನ್ನು ಸ್ಮರಿಸಿದ ಅವರು, ಲಕ್ಷಾಂತರ ಮಕ್ಕಳು ರಾತ್ರಿಯಿಡೀ ಎಚ್ಚರವಿದ್ದು ಓದಿದ್ದಾರೆ, ಅವರ ಪೋಷಕರು ಸಾಲ ಮಾಡಿ ಹಣ ಹೊಂದಿಸಿದ್ದಾರೆ ಮತ್ತು ಅನೇಕ ತಾಯಂದಿರು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಆಭರಣಗಳನ್ನು ಅಡವಿಟ್ಟು ಅಥವಾ ಮಾರಾಟ ಮಾಡಿ ತ್ಯಾಗ ಮಾಡಿದ್ದಾರೆ ಎಂದು ಭಾವುಕರಾಗಿ ನುಡಿದಿದ್ದಾರೆ. ಆದರೆ ಇಷ್ಟೆಲ್ಲಾ ತ್ಯಾಗದ ನಂತರ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಕೇವಲ ಪ್ರಶ್ನೆ ಪತ್ರಿಕೆ ಸೋರಿಕೆ, ಸರ್ಕಾರದ ನಿರ್ಲಕ್ಷ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬೇರೂರಿರುವ ಭ್ರಷ್ಟಾಚಾರ ಮಾತ್ರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೇಪರ್ ಮಾಫಿಯಾ ಯಾವುದೇ ಕಠಿಣ ಶಿಕ್ಷೆಯಿಲ್ಲದೆ ಪ್ರತಿ ಬಾರಿಯೂ ತಪ್ಪಿಸಿಕೊಳ್ಳುತ್ತಿದೆ, ಆದರೆ ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳು ಮಾತ್ರ ಪದೇ ಪದೇ ಮಾನಸಿಕ ಒತ್ತಡ, ಆರ್ಥಿಕ ಹೊರೆ ಮತ್ತು ಅನಿಶ್ಚಿತತೆಯನ್ನು ಅನುಭವಿಸುವಂತಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಕೊನೆಯದಾಗಿ ಪ್ರಧಾನಿ ಮೋದಿ ವಿರುದ್ಧ ಚಾಟಿ ಬೀಸಿದ ಅವರು, ದೇಶಕ್ಕೆ ಭರವಸೆ ನೀಡಿದ್ದ ‘ಅಮೃತ್ ಕಾಲ’ವು ಇಂದು ಯುವಜನತೆಯ ಪಾಲಿಗೆ ‘ವಿಷಕಾರಿ ಯುಗ’ವಾಗಿ ಮಾರ್ಪಟ್ಟಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಸದ್ಯ ಈ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ.

