ಮಂಗಳೂರು : ಮಂಗಳೂರಿನಲ್ಲಿ ಸೋಶಿಯಲ್ ಮೀಡಿಯಾ “ಪ್ರಾಂಕ್” ಮತ್ತು “ಗಿಫ್ಟ್” ಹೆಸರಲ್ಲಿ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ವಿಡಿಯೋ ಟ್ರೆಂಡ್ ಈಗ ಹೊಸ ತಿರುವು ಪಡೆದಿದೆ. ಸಮಾಜ ಮತ್ತು ಸಮುದಾಯದ ಪರವಾಗಿ ಧ್ವನಿ ಎತ್ತಿದ್ದ ರಿಯಾಝ್ ಹರೆಕಳ ಅವರ ಬರಹದ ಬೆನ್ನಲ್ಲೇ, ಅಪಾಯಕಾರಿ ವಿಡಿಯೋ ಮಾಡುತ್ತಿದ್ದ ಇನ್‌ಸ್ಟಾಗ್ರಾಮ್ ಯುವಕರ ಗುಂಪು ಇಂದು ಸಾರ್ವಜನಿಕವಾಗಿ ಕ್ಷಮೆ ಕೇಳಿದೆ.
ಕಳೆದ ಕೆಲವು ದಿನಗಳಲ್ಲಿ ಮಂಗಳೂರಿನ ರೈಲ್ವೆ ಸ್ಟೇಷನ್, ಮಾಲ್, ಕಾಲೇಜು ರಸ್ತೆಗಳಲ್ಲಿ “ಫಾಲೋ ಮಾಡಿದ್ರೆ ಗಿಫ್ಟ್” ಅಂತ ಹೇಳಿ ಯುವತಿಯರನ್ನು ಅಡ್ಡಗಟ್ಟಿ, ಅನುಮತಿ ಇಲ್ಲದೆ ವಿಡಿಯೋ ತೆಗೆಯುವ ಘಟನೆಗಳು ಹೆಚ್ಚಾಗಿದ್ದವು. ಕೇವಲ ವ್ಯೂಸ್ ಮತ್ತು ಫಾಲೋವರ್ಸ್‌ಗಳಿಗಾಗಿ ಕೆಲವು ಯೂಟ್ಯೂಬರ್‌ಗಳು ಹೆಣ್ಣುಮಕ್ಕಳ ಮುಜುಗರದ ಕ್ಷಣಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಈ ಅಪಾಯಕಾರಿ ಟ್ರೆಂಡ್ ಕಾಸರಗೋಡು ಮತ್ತು ಉಪ್ಪಳ ಭಾಗಕ್ಕೂ ಹರಡಿದೆ ಎಂದು ಸ್ಥಳೀಯರು ದೂರಿದ್ದರು.
ಈ ವಿಚಾರವಾಗಿ ರಿಯಾಝ್ ಹರೆಕಳ ಅವರು ಸಮಾಜಕ್ಕೆ ಮತ್ತು ಸಮುದಾಯಕ್ಕೆ ಎಚ್ಚರಿಕೆಯ ಕರೆಗಂಟೆ ನೀಡಿದ್ದರು. ಮುಸ್ಲಿಂ ಹಾಗೂ ಇನ್ನಿತರ ಯುವತಿಯರ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದರೆ ಸುಮ್ಮನೆ ಇರುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಬರೆದಿದ್ದರು. ಈ ಸಂದೇಶವು ಕೇವಲ ಕೇರಳದವರಿಗೆ ಮಾತ್ರ ಸೀಮಿತವಲ್ಲ, ಕರ್ನಾಟಕದವರಿಗೂ ಅನ್ವಯಿಸುತ್ತದೆ ಎಂದು ಅವರು ಎಚ್ಚರಿಸಿದ್ದರು. ಈ ಬರಹದ ಪ್ರಭಾವದಿಂದ ವಿವಾದಿತ ವಿಡಿಯೋ ಮಾಡುತ್ತಿದ್ದ ಯುವಕರು ಇಂದು ಕ್ಷಮೆ ಯಾಚಿಸಿದ್ದು, ಇನ್ಮುಂದೆ ಇಂತಹ ಕೃತ್ಯ ಎಸಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಈ ಬೆಳವಣಿಗೆಯಿಂದ ಕಲಿಯಬೇಕಾದ ಪಾಠವೆಂದರೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹುಚ್ಚಿಗೆ ಬೀಳುವ ಮುನ್ನ ಇನ್ನೊಬ್ಬರ ಗೌರವ ಮತ್ತು ಸುರಕ್ಷತೆಯ ಅರಿವಿರಬೇಕು. ಮಂಗಳೂರು ಪೊಲೀಸರು ಈ ಹಿಂದೆಯೇ ಇಂತಹ “ಗಿಫ್ಟ್-ಫಾಲೋ” ಟ್ರ್ಯಾಪ್‌ಗಳು ಮುಂದೆ ಬ್ಲ್ಯಾಕ್‌ಮೇಲ್‌ಗೆ ದಾರಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದರು. 2025ರಲ್ಲಿ ಮುಲ್ಕಿ ಮತ್ತು ಗುರುಪುರದಲ್ಲಿ ಇಂತಹ ಪ್ರಕರಣಗಳು ದಾಖಲಾಗಿದ್ದು, ಸಮುದಾಯದ ಧ್ವನಿಗೆ ಬೆಲೆ ಕೊಟ್ಟಾಗ ಮಾತ್ರ ಇಂತಹ ಕೆಟ್ಟ ಟ್ರೆಂಡ್‌ಗಳಿಗೆ ಬ್ರೇಕ್ ಹಾಕಲು ಸಾಧ್ಯವಾಗುತ್ತದೆ.

