Thursday, May 14, 2026
Homeತಾಜಾ ಸುದ್ದಿNEET paper leak : ನೀಟ್ ಹಗರಣಕ್ಕೆ ರಾಜಕೀಯ ನಂಟು? ಸಿಬಿಐ ಬಲೆಗೆ ಬಿದ್ದ ಬಿಜೆಪಿ...

NEET paper leak : ನೀಟ್ ಹಗರಣಕ್ಕೆ ರಾಜಕೀಯ ನಂಟು? ಸಿಬಿಐ ಬಲೆಗೆ ಬಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಮತ್ತು ಸಹೋದರ!

ನವದೆಹಲಿ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಕೇಂದ್ರ ತನಿಖಾ ದಳವು, ರಾಜಸ್ಥಾನದ ಜೈಪುರದಲ್ಲಿ ಸುಮಾರು 23ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾರತೀಯ ಜನತಾ ಯುವ ಮೋರ್ಚಾ (BJYM) ಸ್ಥಳೀಯ ಸದಸ್ಯ ದಿನೇಶ್ ಬಿವಾಲ್ ಮತ್ತು ಆತನ ಸಹೋದರ ಮೊಂಗಿಲಾಲ್ ಬಿವಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ. ದಿನೇಶ್ ಬಿವಾಲ್‌ನ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಬಿಜೆಪಿ ಶಾಸಕರು ಮತ್ತು ರಾಜ್ಯ ಮಟ್ಟದ ನಾಯಕರೊಂದಿಗೆ ಇರುವ ಫೋಟೋಗಳು ಪತ್ತೆಯಾಗಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

 

ಪ್ರಾಥಮಿಕ ತನಿಖೆಯ ಪ್ರಕಾರ, ದಿನೇಶ್ ಬಿವಾಲ್ ಗುರುಗ್ರಾಮ್ ಮೂಲದ ವೃತ್ತಿ ಸಲಹೆಗಾರ ಯಶ್ ಯಾದವ್ ಎಂಬಾತನಿಂದ 15 ಲಕ್ಷ ರೂಪಾಯಿಗೆ ಪ್ರಶ್ನೆ ಪತ್ರಿಕೆಯನ್ನು ಖರೀದಿಸಿದ್ದ ಎಂದು ಆರೋಪಿಸಲಾಗಿದೆ. ಯಶ್ ಯಾದವ್ ಈ ಪತ್ರಿಕೆಯನ್ನು ಪ್ರಕರಣದ ಪ್ರಮುಖ ಆರೋಪಿ ಶುಭಮ್ ಜೈನರ್‌ನಿಂದ ಪಡೆದಿದ್ದ ಎನ್ನಲಾಗಿದೆ. ದಿನೇಶ್ ಕಳೆದ ವರ್ಷವೂ ಯಶ್ ಯಾದವ್‌ನಿಂದ ಪ್ರಶ್ನೆ ಪತ್ರಿಕೆ ಖರೀದಿಸಿದ್ದ ಎಂಬ ಸಂಶಯವಿದ್ದು, ಆ ಸಂದರ್ಭದಲ್ಲಿ ಆತನ ಕುಟುಂಬದ ನಾಲ್ವರು ಸದಸ್ಯರು ನೀಟ್‌ನಲ್ಲಿ ಉತ್ತೀರ್ಣರಾಗಿದ್ದರು. ಈ ವರ್ಷವೂ ಮೇ 3ರಂದು ನಡೆದ ಪರೀಕ್ಷೆಗಿಂತ ನಾಲ್ಕು ದಿನಗಳ ಮೊದಲೇ, ಅಂದರೆ ಏಪ್ರಿಲ್ 29ರಂದೇ ಇವರ ಕೈಗೆ ಪತ್ರಿಕೆ ಸೇರಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.

ಪ್ರಕರಣದ ಮತ್ತೊಂದು ಆಘಾತಕಾರಿ ಮಾಹಿತಿ ಎಂದರೆ, ಪ್ರಶ್ನೆ ಪತ್ರಿಕೆಯ ಮುದ್ರಿತ ಪ್ರತಿಯನ್ನು ಮಹಾರಾಷ್ಟ್ರದ ಅಹಲ್ಯಾನಗರ ಮೂಲದ ಧನಂಜಯ್ ಲೋಖಂಡೆ ಎಂಬಾತ ಕೊರಿಯರ್ ಮೂಲಕ ಶುಭಮ್ ಜೈನರ್‌ಗೆ ಕಳುಹಿಸಿಕೊಟ್ಟಿದ್ದ ಎನ್ನಲಾಗುತ್ತಿದೆ. ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಲೋಖಂಡೆಯನ್ನು ಗುರುತಿಸಲಾಗಿದ್ದು, ಸಿಬಿಐ ಈ ಜಾಲದ ಮೇಲೂ ನಿಗಾ ಇಟ್ಟಿದೆ. ಶಿಕ್ಷಣ ಸಚಿವಾಲಯದ ದೂರಿನ ಮೇರೆಗೆ ಸಿಬಿಐ ಈಗಾಗಲೇ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಅವರು ಈ ಹಗರಣದ ಬಗ್ಗೆ ಬಿಜೆಪಿ ಸರ್ಕಾರದ ವಿಳಂಬ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಇದನ್ನು ಓದಿ : Mangaluru : “ಗಿಫ್ಟ್” ಹೆಸರಲ್ಲಿ ಯುವತಿಯರ ಟಾರ್ಗೆಟ್; ರಿಯಾಝ್ ಹರೆಕಳ ಎಚ್ಚರಿಕೆ ಬೆನ್ನಲ್ಲೇ ಇನ್‌ಸ್ಟಾಗ್ರಾಮ್ ಯುವಕರ ಗುಂಪು ಕ್ಷಮೆಯಾಚನೆ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!