ಲಕ್ನೋ : ಉತ್ತರ ಪ್ರದೇಶದಾದ್ಯಂತ ಬುಧವಾರ ಸಂಜೆ ಸಂಭವಿಸಿದ ಪ್ರಬಲ ಚಂಡಮಾರುತ, ಸಿಡಿಲು ಮತ್ತು ಭಾರೀ ಮಳೆಯಿಂದಾಗಿ ಕನಿಷ್ಠ 56 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಖಚಿತಪಡಿಸಿದ್ದಾರೆ. ಬಿರುಗಾಳಿಯ ಅಬ್ಬರಕ್ಕೆ ನೂರಾರು ಮರಗಳು ನೆಲಕ್ಕುರುಳಿದ್ದು, ಮನೆಗಳು ಜಖಂಗೊಂಡಿವೆ. ವಿವಿಧ ಜಿಲ್ಲೆಗಳಿಂದ ಬಂದ ವರದಿಗಳ ಪ್ರಕಾರ, ಪ್ರಯಾಗ್‌ರಾಜ್‌ನಲ್ಲಿ 17, ಭದೋಹಿಯಲ್ಲಿ 16, ಫತೇಪುರ್‌ನಲ್ಲಿ 9, ಬದೌನ್‌ನಲ್ಲಿ 5, ಪ್ರತಾಪ್‌ಗಢದಲ್ಲಿ 4 ಸಾವುಗಳು ಸಂಭವಿಸಿವೆ. ಉಳಿದಂತೆ ಚಂದೌಲಿ, ಖುಷಿನಗರ ಮತ್ತು ಕಾನ್ಪುರ ದೇಹತ್‌ನಲ್ಲಿ ತಲಾ ಇಬ್ಬರು ಹಾಗೂ ಸೋನ್‌ಭದ್ರ ಮತ್ತು ದೇವರಿಯಾದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಪ್ರಯಾಗ್‌ರಾಜ್ ಜಿಲ್ಲಾಡಳಿತದ ಪಟ್ಟಿಯ ಪ್ರಕಾರ, ಹಂಡಿಯಾ ಪ್ರದೇಶದಲ್ಲಿ 7, ಫುಲ್‌ಪುರದಲ್ಲಿ 4, ಸೊರಾಂನಲ್ಲಿ 3, ಮೇಜಾದಲ್ಲಿ 2 ಮತ್ತು ಸದರ್‌ನಲ್ಲಿ ಒಬ್ಬರು ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ಭದೋಹಿಯಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ಫತೇಪುರ್‌ನಲ್ಲಿ ಮೃತಪಟ್ಟ 9 ಮಂದಿಯ ಪೈಕಿ ಖಗಾ ತಹಸಿಲ್‌ನಲ್ಲಿ ಐವರು ಮಹಿಳೆಯರು ಸೇರಿ ಎಂಟು ಮಂದಿ ಸಾವನ್ನಪ್ಪಿದ್ದರೆ, ಸದರ್ ತಹಸಿಲ್‌ನಲ್ಲಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪ್ರತಾಪ್‌ಗಢದಲ್ಲಿ ಗೋಡೆ ಕುಸಿತ, ಸಿಮೆಂಟ್ ಶೆಡ್ ಕುಸಿತ ಮತ್ತು ಸಿಡಿಲು ಬಡಿತದ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಕಾನ್ಪುರ ದೇಹತ್ ಜಿಲ್ಲೆಯಲ್ಲಿ ಮಳೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ರಸೂಲಾಬಾದ್ ಪ್ರದೇಶದ ಭೌತರಿ ಗ್ರಾಮದಲ್ಲಿ 19 ವರ್ಷದ ಯುವತಿ ರುಚಿ, ಮಳೆಯಿಂದ ರಕ್ಷಿಸಿಕೊಳ್ಳಲು ಮೇಕೆಗಳೊಂದಿಗೆ ಬೇವು ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾಳೆ; ಈ ಘಟನೆಯಲ್ಲಿ ಹಲವಾರು ಮೇಕೆಗಳೂ ಬಲಿಯಾಗಿವೆ. ದೇವಿಯಾದಲ್ಲಿ ಸಿಡಿಲು ಬಡಿತಕ್ಕೆ 62 ವರ್ಷದ ಕೋಮಲ್ ಯಾದವ್ ಮತ್ತು 65 ವರ್ಷದ ರಾಮನಾಥ್ ಪ್ರಸಾದ್ ಎಂಬುವವರು ಸಾವನ್ನಪ್ಪಿದ್ದಾರೆ. ಸೋನ್‌ಭದ್ರ ಜಿಲ್ಲೆಯಲ್ಲಿ ಚಂಡಮಾರುತಕ್ಕೆ ಮರವೊಂದು ನೆಲಕ್ಕುರುಳಿದ ಪರಿಣಾಮ ಅದರಡಿ ಸಿಲುಕಿ 38 ವರ್ಷದ ಮಾಧವ್ ಸಿಂಗ್ ಎಂಬುವವರು ಪ್ರಾಣ ಕಳೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಜೀವಹಾನಿ ಮತ್ತು ಆಸ್ತಿಪಾಸ್ತಿ ಹಾನಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಯೊಳಗೆ ಪರಿಹಾರ ತಲುಪಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮಳೆ ಮತ್ತು ಚಂಡಮಾರುತದಿಂದ ಉಂಟಾದ ಹಾನಿಯ ಸಮೀಕ್ಷೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಕಂದಾಯ ಮತ್ತು ಕೃಷಿ ಇಲಾಖೆಗಳು ಹಾಗೂ ವಿಮಾ ಕಂಪನಿಗಳಿಗೆ ಸಿಎಂ ಆದೇಶಿಸಿದ್ದಾರೆ.
ಇದನ್ನು ಓದಿ : Morning mistakes habits : ಮೆದುಳಿನ ಸಾಮರ್ಥ್ಯವನ್ನೇ ಕುಂದಿಸಬಹುದು ಮುಂಜಾನೆಯ ಈ 5 ತಪ್ಪು ಅಭ್ಯಾಸಗಳು!

