ಕುಂದಾಪುರ : ಕುಂದಾಪುರದಲ್ಲಿ ಮೇ 14ರ ಗುರುವಾರ ಸಂಜೆ ಸುರಿದ ಮೊದಲ ಮಳೆಗೆ ಭೀಕರ ಸಿಡಿಲು ಬಡಿದು, ಪಂಜಾಬ್ ಮೂಲದ ಐ.ಆರ್.ಬಿ (IRB) ಕಂಪನಿಯ ಕಾರ್ಮಿಕ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ತ್ರಾಸಿ ಸಮೀಪದ ಮುಳ್ಳಿಕಟ್ಟೆ ಎಂಬಲ್ಲಿನ ಅರಾಟೆ ಸೇತುವೆಯ ಮೇಲೆ ಈ ದುರ್ಘಟನೆ ಸಂಭವಿಸಿದ್ದು, ಸಿಡಿಲು ಬಡಿದು ಸಾವನ್ನಪ್ಪಿದ ಕಾರ್ಮಿಕನನ್ನು ಪಂಜಾಬ್ ರಾಜ್ಯದ ನಿವಾಸಿ ಅಶಿತೋಷ್ ಸಿಂಗ್ (35) ಎಂದು ಗುರುತಿಸಲಾಗಿದೆ.
ಅಶಿತೋಷ್ ಹಾಗೂ ನವಜ್ಯೋತ್ ಸಿಂಗ್ ಇಬ್ಬರೂ ಅರಾಟೆ ಸೇತುವೆಯ ದುರಸ್ತಿ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳ ವೀಕ್ಷಣೆಗಾಗಿ ಸೇತುವೆಯ ಬಳಿ ಬಂದಿದ್ದರು. ಗುರುವಾರ ಸಂಜೆ 7 ಗಂಟೆಯ ಸುಮಾರಿಗೆ ಅವರು ಸೇತುವೆಯ ಮೇಲೆ ನಿಂತಿದ್ದಾಗ ದಿಢೀರ್ ಮಿಂಚು ಸಹಿತ ಸಿಡಿಲು ಬಡಿದಿದೆ. ಇದರ ಪರಿಣಾಮವಾಗಿ ಅಶಿತೋಷ್ ಸಿಂಗ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಅವರ ಸಮೀಪವೇ ಕೆಲಸ ಮಾಡುತ್ತಿದ್ದ ನವಜ್ಯೋತ್ ಸಿಂಗ್ (37) ಎಂಬವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಸ್ತುತ ಅಶಿತೋಷ್ ಅವರ ಮೃತದೇಹವನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಹುಕಾಲದ ನಿರೀಕ್ಷೆಯ ನಂತರ ಬಂದ ಮೊದಲ ಮಳೆಯೇ ಕಾರ್ಮಿಕನ ಪ್ರಾಣ ಪಡೆದಿರುವುದು ಕರಾವಳಿ ಜನತೆಯಲ್ಲಿ ವಿಷಾದ ಮೂಡಿಸಿದೆ.
ಇದನ್ನು ಓದಿ : Mangaluru : ಗಾಂಜಾ ಮಾರಾಟಕ್ಕೆ ಯತ್ನಿಸಿದ ಕುಖ್ಯಾತ ಆರೋಪಿ ಇರ್ಷಾದ್ ಬಂಧನ!



