HomeLOCALUllal : ರಸ್ತೆಯಲ್ಲಿ ಮೀನಿನ ಎಣ್ಣೆ ಸೋರಿಕೆ, ಸವಾರರು ಪಲ್ಟಿ! ಕ್ಯಾಂಟರ್ ತಡೆದು ಸಾರ್ವಜನಿಕರಿಂದ...

Ullal : ರಸ್ತೆಯಲ್ಲಿ ಮೀನಿನ ಎಣ್ಣೆ ಸೋರಿಕೆ, ಸವಾರರು ಪಲ್ಟಿ! ಕ್ಯಾಂಟರ್ ತಡೆದು ಸಾರ್ವಜನಿಕರಿಂದ ಭಾರಿ ಪ್ರತಿಭಟನೆ

ಉಳ್ಳಾಲ :  ಉಳ್ಳಾಲದ ಕೋಟೆಪುರದಲ್ಲಿರುವ ಫಿಶ್ ಮಿಲ್ ಫ್ಯಾಕ್ಟರಿಯಿಂದ ಮೀನಿನ ಎಣ್ಣೆ ಹೊತ್ತೊಯ್ಯುತ್ತಿದ್ದ ಕ್ಯಾಂಟರ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ರಸ್ತೆಯುದ್ದಕ್ಕೂ ಎಣ್ಣೆ ಸೋರಿಕೆಯಾಗಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಜಾರಿ ಬಿದ್ದು ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ಉಳ್ಳಾಲ ಬೈಲಿನಲ್ಲಿ ನಡೆದಿದೆ. ಕೋಟೆಪುರದಿಂದ ಮಂಗಳೂರು ಬಂದರಿಗೆ ಫಿಶ್ ಆಯಿಲ್ ಸಾಗಿಸುತ್ತಿದ್ದ ಈ ಕ್ಯಾಂಟರ್‌ನಿಂದ ಅಬ್ಬಕ್ಕ ಸರ್ಕಲ್‌ನಿಂದ ಉಳ್ಳಾಲ ಬೈಲ್‌ವರೆಗೆ ಎಣ್ಣೆ ಚೆಲ್ಲಲ್ಪಟ್ಟಿದ್ದು, ರಸ್ತೆಯ ಮೇಲಿದ್ದ ಎಣ್ಣೆಯ ಜಿಡ್ಡಿನಿಂದಾಗಿ ನಿಯಂತ್ರಣ ತಪ್ಪಿದ ಹಲವಾರು ದ್ವಿಚಕ್ರ ವಾಹನ ಸವಾರರು ಸಾಲುಸಾಲಾಗಿ ಉರುಳಿ ಬಿದ್ದು ಗಾಯಗೊಂಡಿದ್ದಾರೆ.

ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಮೀನಿನ ಎಣ್ಣೆ ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ಅನ್ನು ಉಳ್ಳಾಲ ಬೈಲ್‌ನಲ್ಲಿ ತಡೆದು ನಿಲ್ಲಿಸಿ, ಫ್ಯಾಕ್ಟರಿ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಧಾನಸಭಾ ಸ್ಪೀಕರ್ ಮತ್ತು ಸ್ಥಳೀಯ ಶಾಸಕ ಯು.ಟಿ. ಖಾದರ್ ಅವರು ಮಂಗಳೂರು ಪೊಲೀಸ್ ಆಯುಕ್ತರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಪಘಾತದಿಂದ ಗಾಯಗೊಂಡ ಸವಾರರಿಗೆ ಫಿಶ್ ಮಿಲ್ ಮಾಲೀಕರು ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಂತೆ ಕೈಗಾರಿಕಾ ಇಲಾಖೆ ಮತ್ತು ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ಖಾದರ್ ತಿಳಿಸಿದ್ದಾರೆ. ಕೈಗಾರಿಕೆಯ ಅಭಿವೃದ್ಧಿಗೆ ಬೆಂಬಲವಿದ್ದರೂ, ಸಾರ್ವಜನಿಕರ ಪ್ರಾಣಕ್ಕೆ ತೊಂದರೆಯಾದರೆ ಸಹಿಸಲು ಸಾಧ್ಯವಿಲ್ಲ ಎಂದು ಅವರು ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ : Kundapura : ಮೊದಲ ಮಳೆಗೆ ಸಿಡಿಲು ಬಡಿದು ಪಂಜಾಬ್ ಮೂಲದ ಐ.ಆರ್.ಬಿ ಕಾರ್ಮಿಕ ಸಾವು!

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments