ಮೂಡುಬಿದ್ರೆ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡುಬಿದ್ರಿ ಪೊಲೀಸರು ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆಯ ಆರೋಪಿಗಳಾದ ಮೊಹಮ್ಮದ್ ಆರೀಪ್ ಮತ್ತು ಇಮ್ರಾನ್ ಅವರನ್ನು ಬಂಧಿಸಲಾಗಿದ್ದು, ಸಾಗಣೆಗೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಗುರುವಾರ (ಮೇ 14) ಬೆಳಿಗ್ಗೆ, ಪಿಎಸ್ಐ ಕೃಷ್ಣಪ್ಪ ಮತ್ತು ಅವರ ತಂಡವು ಗಸ್ತಿನಲ್ಲಿದ್ದಾಗ, ಬೆಳುವಾಯಿಯಿಂದ ಅಕ್ರಮ ದನ ಸಾಗಣೆಯ ಬಗ್ಗೆ ನಿರ್ದಿಷ್ಟ ಮಾಹಿತಿ ಸಿಕ್ಕಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು.ಬೆಳಿಗ್ಗೆ 7:30 ರ ಸುಮಾರಿಗೆ ಅನುಮಾನಾಸ್ಪದ ಮಾರುತಿ ಬ್ರೆಝಾ (KA19 MK 4265) ಪೊಲೀಸರ ಬಳಿಗೆ ಬಂದಿದ್ದು, ಪೊಲೀಸರು ಚಾಲಕನಿಗೆ ನಿಲ್ಲಿಸಲು ಸೂಚಿಸಿದಾಗ, ಅವನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ.
ಪೊಲೀಸರು ತಕ್ಷಣವೇ ಈ ಕಾರನ್ನು ಬೆನ್ನಟ್ಟಿದಾಗ, ಗಲಿಬಿಲಿಗೊಂಡ ಆರೋಪಿಗಳು ತಪ್ಪಿಸಿಕೊಳ್ಳುವ ಭರದಲ್ಲಿ ಗುಂಡುಕಲ್ಲು ರಸ್ತೆಯ ಮನೆಯೊಂದರ ಕಂಪೌಂಡ್ ಒಳಗೆ ಕಾರನ್ನು ನುಗ್ಗಿಸಿ ಓಡಿಹೋಗಲು ಯತ್ನಿಸಿದ್ದಾರೆ. ಆದರೆ ಸನ್ನದ್ಧರಾಗಿದ್ದ ಪೊಲೀಸರು ಒಟ್ಟಾಗಿ ಆರೋಪಿಗಳನ್ನು ಸುತ್ತುವರಿದು ಸ್ಥಳದಲ್ಲೇ ಲಾಕ್ ಮಾಡಿದ್ದಾರೆ. ಬಂಧಿತರನ್ನು ಹಳೇ ಅಪರಾಧಿಗಳಾದ ಮಹಮ್ಮದ್ ಆರೀಪ್ ಮತ್ತು ಇಮ್ರಾನ್ ಎಂದು ಗುರುತಿಸಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ವಶಪಡಿಸಿಕೊಂಡ ಕಾರನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಘೋರ ದೃಶ್ಯ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಆರೋಪಿಗಳು ಕಾರಿನ ಹಿಂಬದಿ ಸೀಟುಗಳನ್ನು ಸಂಪೂರ್ಣವಾಗಿ ಕಿತ್ತುಹಾಕಿ, ಅಲ್ಲಿ ಪ್ಲಾಸ್ಟಿಕ್ ಶೀಟ್ ಹಾಸಿ ಅದರ ಮೇಲೆ ಕರುವೊಂದರ ಕಾಲು ಮತ್ತು ತಲೆಯನ್ನು ಅತ್ಯಂತ ಹಿಂಸಾತ್ಮಕವಾಗಿ ಹಗ್ಗದಿಂದ ಬಿಗಿದು ಕಟ್ಟಿ ಹಾಕಿದ್ದರು. ಕಳೆದ ಒಂದು ವಾರದಿಂದ ವಿವಿಧೆಡೆ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದು, ಮಾಂಸ ಮಾರಾಟದ ಉದ್ದೇಶದಿಂದಲೇ ಈ ಕೃತ್ಯ ಎಸಗುತ್ತಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.
ಬಂಧಿತ ಇಬ್ಬರೂ ಆರೋಪಿಗಳು ಕರಾವಳಿಯ ವಿವಿಧ ಠಾಣೆಗಳಲ್ಲಿ ಹಳೆಯ ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಮೊಹಮ್ಮದ್ ಆರಿಫ್ ವಿರುದ್ಧ ಬಜಪೆ, ಬಣಕಲ್ ಮತ್ತು ಮೂಡಬಿದ್ರೆ ಠಾಣೆಗಳಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಇಮ್ರಾನ್ ವಿರುದ್ಧ ಕಾರ್ಕಳ ಮತ್ತು ಮೂಡಬಿದ್ರೆ ಠಾಣೆಗಳಲ್ಲಿ ಮಾದಕ ದ್ರವ್ಯ ಮಾರಾಟ (NDPS), ಜೂಜಾಟ ಹಾಗೂ ಗೋಹತ್ಯೆಯೂ ಸೇರಿದಂತೆ ಐದಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನು ಓದಿ : Udupi : ಉಡುಪಿ ನೇಜಾರ್‌ನಲ್ಲಿ ಭೀಕರ ಅಪಘಾತ ; 12 ವರ್ಷದ ಬಾಲಕ ಸಾವು!



