Homeತಾಜಾ ಸುದ್ದಿBeltangady : ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ, 23.67 ಲಕ್ಷ ಮೌಲ್ಯದ ಸೊತ್ತು ಪತ್ತೆ

Beltangady : ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ, 23.67 ಲಕ್ಷ ಮೌಲ್ಯದ ಸೊತ್ತು ಪತ್ತೆ

ಬೆಳ್ತಂಗಡಿ, ಜೂನ್ 9 : ಕಳೆದ ಏಪ್ರಿಲ್ 5, 2026 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಿಂದ ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳವಾಗಿದ್ದ ಕುರಿತು ಪ್ರಕರಣ (ಮೊ.ಸಂ. 38/2026) ದಾಖಲಾಗಿತ್ತು. ಈ ಗಂಭೀರ ಕಳ್ಳತನ ಪ್ರಕರಣದ ಸುಳಿವು ಬೆನ್ನಟ್ಟಿದ ಜಂಟಿ ಪೊಲೀಸ್ ತಂಡವು, ಮೇ 15 ರಂದು ಮೊದಲ ಆರೋಪಿಯಾದ ಬಂಟ್ವಾಳದ ಕೋಲ್ನಾಡು ಮೂಲದ, ಪ್ರಸ್ತುತ ಕಾಸರಗೋಡು ನಿವಾಸಿ ಹಮೀದ್ ಎಂಬಾತನನ್ನು ವಶಕ್ಕೆ ಪಡೆದಿತ್ತು. ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಿ ಹಮೀದ್‌ನನ್ನು ತೀವ್ರ ಪೊಲೀಸ್ ವಿಚಾರಣೆಗೆ ಒಳಪಡಿಸಿದಾಗ ಅಂತರರಾಜ್ಯ ಕಳ್ಳರ ಗ್ಯಾಂಗ್‌ನ ಅಸಲಿ ಸಂಚು ಬಯಲಾಗಿದೆ. ಆತ ನೀಡಿದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಜೂನ್ 7 ರಂದು ಮತ್ತೊಬ್ಬ ಪ್ರಮುಖ ಆರೋಪಿ, ಕೋಲ್ನಾಡು ಮೂಲದ ಕಾಸರಗೋಡು ನಿವಾಸಿ ಜಾಬೀರ್ ಅಲಿಯಾಸ್ ಜಾಬಿ (38) ಎಂಬಾತನನ್ನು ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಪುಂಜಾಲಕಟ್ಟೆ ಠಾಣೆಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ 68.690 ಗ್ರಾಂ ಚಿನ್ನಾಭರಣ ಮತ್ತು 2 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ, ಕಳೆದು ವರ್ಷ ಅಂದರೆ 2025 ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಕ್ಕೆ (ಮೊ.ಸಂ. 28/2025) ಸಂಬಂಧಿಸಿದ 21.810 ಗ್ರಾಂ ಚಿನ್ನದ ಆಭರಣಗಳನ್ನು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಳ್ಳಲಾದ ಇಡೀ ಸ್ವತ್ತಿನ ಒಟ್ಟು ಮೌಲ್ಯ ಸುಮಾರು 23,67,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಗಳು ಕರಾವಳಿಯಾದ್ಯಂತ ಹರಡಿಕೊಂಡಿದ್ದ ಭಾರಿ ಕಳ್ಳತನ ಜಾಲದ ಭಾಗವಾಗಿದ್ದು, ಉಪ್ಪಿನಂಗಡಿ, ಬಂಟ್ವಾಳ ನಗರ ಮತ್ತು ಬೆಳ್ತಂಗಡಿ ಠಾಣೆಗಳ ವ್ಯಾಪ್ತಿ ಸೇರಿದಂತೆ ಒಟ್ಟು ಐದು ದೊಡ್ಡ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಭರ್ಜರಿ ಬೇಟೆಯ ಯಶಸ್ವಿ ಕಾರ್ಯಾಚರಣೆಯನ್ನು ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ (DYSP) ರೋಹಿಣಿ ಸಿ.ಕೆ. ಅವರ ನೇರ ನೇತೃತ್ವದಲ್ಲಿ ನಡೆಸಲಾಗಿದೆ. ತನಿಖಾ ತಂಡದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿಪಿಐ ರವಿ ಬಿ.ಎಸ್., ಉಪ್ಪಿನಂಗಡಿ ಸಿಪಿಐ ನಾಗರಾಜ್ ಹೆಚ್.ಇ., ಪುಂಜಾಲಕಟ್ಟೆ ಪಿಎಸ್ಐ ರಾಜೇಶ್ ಕೆ.ವಿ., ಮತ್ತು ಸಿಬ್ಬಂದಿಗಳಾದ ಎಎಸ್ಐ ಬೆನ್ನಿಚನ್, ಸುಂದರ್ ಶೆಟ್ಟಿ, ವಿಶ್ವನಾಥ್ ನಾಯಕ್, ಪ್ರವೀಣ್ ಮುರುಗೋಳಿ, ರಾಜೇಶ್ ಎನ್., ವಿಜಯ್ ಕುಮಾರ್ ರೈ, ರಾಹುಲ್ ರಾವ್, ಸಂತೋಷ್, ಬಸವರಾಜ್, ರಂಜಿತ್ ಮತ್ತು ನಾಗರಾಜ್ ಅವರು ಶ್ರಮಿಸಿದ್ದಾರೆ. ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ತನಿಖೆಗೆ ಅಗತ್ಯ ತಾಂತ್ರಿಕ ನೆರವು ನೀಡಿದ್ದಾರೆ. ಉನ್ನತ ಅಧಿಕಾರಿಗಳ ತಂಡದ ಈ ಅದ್ಭುತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments