Homeತಾಜಾ ಸುದ್ದಿManipal : ಕುಂಜಿಬೆಟ್ಟು ಮನೆಗಳ್ಳತನ ಕೇಸ್ ಕ್ಲೋಸ್; ಉಡುಪಿ ಪೊಲೀಸರ ಬಲೆಗೆ ಬಿದ್ದ ಕುಖ್ಯಾತ "Tattoo-313"...

Manipal : ಕುಂಜಿಬೆಟ್ಟು ಮನೆಗಳ್ಳತನ ಕೇಸ್ ಕ್ಲೋಸ್; ಉಡುಪಿ ಪೊಲೀಸರ ಬಲೆಗೆ ಬಿದ್ದ ಕುಖ್ಯಾತ “Tattoo-313” ಗ್ಯಾಂಗ್!

ಮಣಿಪಾಲ : ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಿಬೆಟ್ಟುವಿನ ನಿವಾಸಿ ಅಮಿತ್ ಡೇನಿಯಲ್ ಎಂಬುವವರ ಮನೆಯಲ್ಲಿ ಕಳೆದ ಫೆಬ್ರವರಿ 3 ಮತ್ತು 4 ರ ನಡುವೆ ಭಾರಿ ಕಳ್ಳತನ ನಡೆದಿತ್ತು. ಕುಟುಂಬಸ್ಥರು ಇಲ್ಲದ ವೇಳೆ ಮನೆಗೆ ನುಗ್ಗಿದ್ದ ಕಳ್ಳರು ಸುಮಾರು 75 ಗ್ರಾಂ ತೂಕದ, 7 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತು ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಗಂಭೀರ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಜೂನ್ 6 ರಂದು ನೈಟ್ ಪೆಟ್ರೋಲಿಂಗ್ (ರಾತ್ರಿ ಗಸ್ತು) ನಡೆಸುತ್ತಿದ್ದಾಗ ದೊಡ್ಡ ಬ್ರೇಕ್‌ಥ್ರೂ ಸಿಕ್ಕಿದೆ. ಇಂದ್ರಾಣಿ ರೈಲ್ವೇ ಗೋದಾಮು ರಸ್ತೆಯ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಅಂತರರಾಜ್ಯ ಮಟ್ಟದ ಭೀಕರ ಕಳ್ಳರ ಜಾಲದ ಅಸಲಿ ಮುಖವಾಡ ಬಯಲಾಗಿದೆ. ಬಂಧಿತರನ್ನು ಬೆಂಗಳೂರಿನ ಸಿಂಗಸಂದ್ರ ನಿವಾಸಿ ದರ್ಶನ್ ಆರ್. (21) ಮತ್ತು ದಾವಣಗೆರೆಯ ಬಸವನಹಳ್ಳಿ ನಿವಾಸಿ ಚಂದ್ರು (26) ಎಂದು ಗುರುತಿಸಲಾಗಿದೆ.

ವಿಚಾರಣೆಯ ವೇಳೆ ಆರೋಪಿಗಳು ಬಿಚ್ಚಿಟ್ಟ ಸತ್ಯ ಕೇಳಿ ಖಾಕಿ ಪಡೆಯೇ ಬೆಚ್ಚಿಬಿದ್ದಿದೆ. ಈ ಖದೀಮರು ತಮಗೊಂದು ಪ್ರತ್ಯೇಕ ಗ್ಯಾಂಗ್ ಕಟ್ಟಿಕೊಂಡಿದ್ದು, ಅದಕ್ಕೆ “ಟ್ಯಾಟೂ-313 ಗ್ಯಾಂಗ್” ಎಂದು ಹೆಸರಿಟ್ಟಿದ್ದಾರೆ. ತಮ್ಮ ಗುರುತಿಗಾಗಿ ಇಡೀ ಗ್ಯಾಂಗ್‌ನ ಸದಸ್ಯರು ತಮ್ಮ ದೇಹದ ಮೇಲೆ “313” ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ! ಇವರ ಕಾರ್ಯಾಚರಣೆಯ ಶೈಲಿ ಅತ್ಯಂತ ಚಾಣಾಕ್ಷತೆಯಿಂದ ಕೂಡಿತ್ತು. ರೈಲ್ವೇ ನಿಲ್ದಾಣಗಳು ಮತ್ತು ರೈಲ್ವೇ ಹಳಿಗಳ ಸಮೀಪವಿರುವ ಬೀಗ ಹಾಕಿದ ಮನೆಗಳನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ರಾತ್ರಿ ವೇಳೆ ಮುಖವಾಡ, ಗ್ಲೌಸ್ ಮತ್ತು ಸಾಕ್ಸ್ ಧರಿಸಿ, ಕಬ್ಬಿಣದ ಆಯುಧಗಳಿಂದ ಮುಂಭಾಗದ ಬಾಗಿಲು ಮುರಿದು ಕ್ಷಣಾರ್ಧದಲ್ಲಿ ಲೂಟಿ ಮಾಡುತ್ತಿದ್ದರು. ಕದ್ದ ಚಿನ್ನವನ್ನು ಇವರು ಶಿವಮೊಗ್ಗದ ಲಾಡ್ಜ್ ಒಂದರ ರೂಮಿನಲ್ಲಿ ಅಡಗಿಸಿಟ್ಟಿದ್ದು, ಪೊಲೀಸರು ಅಲ್ಲಿಗೆ ದಾಳಿ ನಡೆಸಿ ನೆಕ್ಲೇಸ್, ಚೈನ್, ಕಿವಿಯೋಲೆ ಸೇರಿದಂತೆ 7.9 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಈ ಗ್ಯಾಂಗ್ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಹತ್ತಾರು ಕಳ್ಳತನ ಎಸಗಿದ್ದು, ಸೆಪ್ಟೆಂಬರ್ 2025 ರಲ್ಲಿ ಸುರತ್ಕಲ್‌ನಲ್ಲಿ ನಡೆದಿದ್ದ ಕಳ್ಳತನದಲ್ಲೂ ಭಾಗಿಯಾಗಿರುವುದು ಪತ್ತೆಯಾಗಿದೆ. ಸದ್ಯ ಈ ಗ್ಯಾಂಗ್‌ನ ಇನ್ನಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.

ಇದನ್ನು ಓದಿ : Manjeshwar : ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ರೈಲು ಬಡಿದು ಇಬ್ಬರು ಯುವಕರು ಸಾವು!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments