ಬೆಳ್ತಂಗಡಿ : ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಕೆ.ಇ.ಬಿ ಕಚೇರಿ ಪಕ್ಕದ ಸರ್ಕಾರಿ ಜಾಗದಲ್ಲಿ ಕಳೆದ 20 ವರ್ಷಗಳಿಂದ ಅಕ್ರಮವಾಗಿ ನಿರ್ಮಾಣಗೊಂಡಿದ್ದ ‘ಪವನ್ ಕ್ಯಾಂಟಿನ್’ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ಸುಂದರ್ ಶೆಟ್ಟಿ ಎಂಬುವವರು ಈ ಕ್ಯಾಂಟಿನ್ ನಡೆಸುತ್ತಿದ್ದರು. ಪ್ರತಿ ರವಿವಾರ ಕ್ಯಾಂಟಿನ್‌ಗೆ ರಜೆ ಇರುತ್ತಿತ್ತು. ಈ ರಜೆಯ ದಿನವನ್ನೇ ಬಂಡವಾಳ ಮಾಡಿಕೊಂಡಿದ್ದ ಮಾಲೀಕ ಸುಂದರ್ ಶೆಟ್ಟಿ, ಕ್ಯಾಂಟಿನ್ ಒಳಗಡೆಯೇ ಬೆಡ್ ರೂಂ ಮತ್ತು ಶೌಚಾಲಯದ ವ್ಯವಸ್ಥೆ ಮಾಡಿಕೊಂಡು ಮಹಿಳೆಯರನ್ನು ಕರೆತಂದು ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಈ ಅಕ್ರಮ ಚಟುವಟಿಕೆಯ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮೇ 10ರಂದು ಸಂಜೆ 5 ಗಂಟೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ಕ್ಯಾಂಟಿನ್ ಮಾಲೀಕ ಸುಂದರ್ ಶೆಟ್ಟಿ (55), ನಾವೂರು ನಿವಾಸಿ ಉಸ್ಮಾನ್ (38) ಮತ್ತು ಕಲ್ಲೇರಿ ನಿವಾಸಿ ಹೈದರ್ (45) ಎಂಬ ಮೂವರನ್ನು ಬಂಧಿಸಲಾಗಿದೆ. ಇದೇ ಸಂದರ್ಭದಲ್ಲಿ ದಂಧೆಯಲ್ಲಿದ್ದ 29 ವರ್ಷದ ಓರ್ವ ಸಂತ್ರಸ್ತ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ದಾಳಿಯ ವೇಳೆ ಸ್ಥಳದಲ್ಲಿ ಮೊಬೈಲ್ ಫೋನ್‌ಗಳು, 5 ಸಾವಿರ ನಗದು ಹಣ ಮತ್ತು ಗರ್ಭ ನಿರೋಧಕಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದ ತಂಡದಲ್ಲಿ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷ ಹಾಗೂ ಸಿಬ್ಬಂದಿಗಳು ಈ ಯಶಸ್ವಿ ದಾಳಿ ನಡೆಸಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

