Homeತಾಜಾ ಸುದ್ದಿJammu Kashmir : ಖಮೇನಿ ಸಾವು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಗೆ ಆಗ್ರಹ: ಜಮ್ಮು ಮತ್ತು...

Jammu Kashmir : ಖಮೇನಿ ಸಾವು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಗೆ ಆಗ್ರಹ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಮುಂದೂಡಿಕೆ

ಜಮ್ಮು  : ಜಮ್ಮು  ಮತ್ತು ಕಾಶ್ಮೀರ ವಿಧಾನಸಭೆಯ ಬಜೆಟ್ ಅಧಿವೇಶನವು ಐದು ವಾರಗಳ ದೀರ್ಘ ಬಿಡುವಿನ ನಂತರ ಶುಕ್ರವಾರ ಪುನರಾರಂಭಗೊಂಡಿದ್ದು, ಮೊದಲ ದಿನವೇ ಸದನವು ತೀವ್ರ ಗದ್ದಲ ಮತ್ತು ಘೋಷಣೆಗಳಿಗೆ ಸಾಕ್ಷಿಯಾಯಿತು. ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ವಾಕ್ಸಮರ ಏರ್ಪಟ್ಟಿತು. ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರು ಶಾಸಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಉಭಯ ಬದಿಗಳ ಸದಸ್ಯರು ಆಸನಗಳಿಂದ ಎದ್ದು ನಿಂತು ಅಬ್ಬರಿಸಿದ್ದರಿಂದ ಕಲಾಪವನ್ನು ಅರ್ಧ ಗಂಟೆ ಕಾಲ ಮುಂದೂಡಬೇಕಾಯಿತು.

ಸದನದಲ್ಲಿ ಗದ್ದಲಕ್ಕೆ ಪ್ರಮುಖ ಕಾರಣವಾಗಿದ್ದು ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ವಿಚಾರ. ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (NC), ಕಾಂಗ್ರೆಸ್, ಪಿಡಿಪಿ ಮತ್ತು ಸಿಪಿಐ(ಎಂ) ಶಾಸಕರು ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಎನ್‌ಸಿ ಶಾಸಕ ತನ್ವೀರ್ ಸಾದಿಕ್ ಅವರು ಕಪ್ಪು ದಿರಿಸು ಧರಿಸಿ ಖಮೇನಿ ಅವರ ಭಾವಚಿತ್ರವನ್ನು ಪ್ರದರ್ಶಿಸಿದರೆ, ಇತರ ಅನೇಕ ಶಾಸಕರು ಕಪ್ಪು ಪಟ್ಟಿ ಧರಿಸಿ ಇರಾನ್ ಪರ ಒಗ್ಗಟ್ಟು ಪ್ರದರ್ಶಿಸಿದರು. ಇಸ್ರೇಲ್-ಅಮೆರಿಕದ ಈ ದಾಳಿಯನ್ನು ಸದನವು ಅಧಿಕೃತವಾಗಿ ಖಂಡಿಸಬೇಕು ಎಂದು ಸಿಪಿಐ(ಎಂ) ನಾಯಕ ಎಂ.ವೈ. ತರಿಗಾಮಿ ಒತ್ತಾಯಿಸಿದರು.

ಇನ್ನೊಂದೆಡೆ, ಬಿಜೆಪಿ ಶಾಸಕರು ಜಮ್ಮು ಭಾಗದ ಶೈಕ್ಷಣಿಕ ಹಿತಾಸಕ್ತಿಗಳಿಗಾಗಿ ಧ್ವನಿ ಎತ್ತಿದರು. ಜಮ್ಮುವಿನಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (NLU) ಸ್ಥಾಪಿಸಬೇಕೆಂದು ಒತ್ತಾಯಿಸಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು, “ಭಾರತ್ ಮಾತಾ ಕಿ ಜೈ” ಮತ್ತು “ವಂದೇ ಮಾತರಂ” ಘೋಷಣೆಗಳನ್ನು ಕೂಗಿದರು. ಸಚಿವೆ ಸಕೀನಾ ಇಟೂ ಅವರು ಉತ್ತರಿಸಲು ಮುಂದಾದಾಗ ಬಿಜೆಪಿ ಶಾಸಕ ಸುರ್ಜಿತ್ ಸಿಂಗ್ ಸ್ಲಾಥಿಯಾ ಅವರು ವಿಶ್ವವಿದ್ಯಾಲಯದ ಕುರಿತು ಸರ್ಕಾರದ ಸ್ಪಷ್ಟ ಭರವಸೆಗಾಗಿ ಪಟ್ಟು ಹಿಡಿದರು. ಜಮ್ಮು ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸುವುದಿಲ್ಲ ಎಂದು ಬಿಜೆಪಿ ಸದಸ್ಯರು ಅಬ್ಬರಿಸಿದರು.

ಒಂದು ಹಂತದಲ್ಲಿ ಕಾಂಗ್ರೆಸ್ ಶಾಸಕ ಇರ್ಫಾನ್ ಹಫೀಜ್ ಲೋನ್ ಮತ್ತು ಬಿಜೆಪಿ ಸದಸ್ಯರ ನಡುವೆ ಭಾರಿ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪ್ರಧಾನಿ ಮೋದಿ ಪರ ಮತ್ತು ವಿರೋಧ ಘೋಷಣೆಗಳಿಂದ ಸದನ ಮೊಳಗಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಮಾರ್ಷಲ್‌ಗಳು ತಕ್ಷಣ ಮಧ್ಯಪ್ರವೇಶಿಸಿ ಶಾಸಕರನ್ನು ತಡೆದರು. ಗದ್ದಲದ ನಡುವೆಯೇ ಕಲಾಪವನ್ನು ಅರ್ಧ ಗಂಟೆ ಮುಂದೂಡಿದ ಸ್ಪೀಕರ್, ಪ್ರಶ್ನೋತ್ತರ ಅವಧಿಯ ನಂತರ ವ್ಯವಸ್ಥಿತವಾಗಿ ಚರ್ಚೆ ನಡೆಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಈ ಬಜೆಟ್ ಅಧಿವೇಶನವು ಏಪ್ರಿಲ್ 4 ರವರೆಗೆ ಮುಂದುವರಿಯಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments