ಕಾರ್ಕಳ : ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ (CITU) ಮತ್ತು ಕಾರ್ಕಳ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಶನಿವಾರ ಕಾರ್ಕಳದ ಸಿಐಟಿಯು ಕಚೇರಿಯಲ್ಲಿ ಬೀಡಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ರಾಜ್ಯಾದ್ಯಂತ ಅಸಂಘಟಿತ ವಲಯದಲ್ಲಿ ದುಡಿಯುವ ಬೀಡಿ ಕಾರ್ಮಿಕರಿಗಾಗಿ ಈ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡುತ್ತಿದೆ. ಕಾರ್ಕಳ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀಡಿ ಕಾರ್ಮಿಕರಿದ್ದು, ಮೊದಲ ಹಂತವಾಗಿ ಹಲವು ಕಾರ್ಮಿಕರಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಯಿತು.
ಈ ಯೋಜನೆಯು ಕಾರ್ಮಿಕರಿಗೆ ಪ್ರಮುಖವಾಗಿ ಅಪಘಾತ ಪರಿಹಾರ ಮತ್ತು ಸಹಜ ಮರಣ ಪರಿಹಾರದ ಸೌಲಭ್ಯಗಳನ್ನು ಒದಗಿಸಲಿದೆ. ಕರ್ನಾಟಕದಲ್ಲಿ ಲಕ್ಷಾಂತರ ಬೀಡಿ ಕಾರ್ಮಿಕರು ಕಡಿಮೆ ವೇತನದಲ್ಲಿ ದುಡಿಯುತ್ತಿದ್ದು, ಅಂತಹವರಿಗೆ ಈ ಸ್ಮಾರ್ಟ್ ಕಾರ್ಡ್ ಜೀವನದ ಭದ್ರತೆಗೆ ಪೂರಕವಾಗಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್ ಅಭಿಪ್ರಾಯಪಟ್ಟರು. ಅಲ್ಲದೆ, ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಮತ್ತಷ್ಟು ಸಮರ್ಪಕವಾಗಿ ಜಾರಿಗೊಳಿಸಲು ಮತ್ತು ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಅವರು ಕಾರ್ಮಿಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾರ್ಕಳ ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ ಮತ್ತು ಸಿಐಟಿಯು ಮುಖಂಡರಾದ ಪುಷ್ಪ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಇದನ್ನು ಓದಿ : Uppinangady : ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ರೋಡ್ ರೋಲರ್ ಅಡಿಗೆ ಬಿದ್ದು ವ್ಯಕ್ತಿ ಸಾವು!

