ಕಾರವಾರ, ಏಪ್ರಿಲ್ 24 : ಪರೀಕ್ಷೆಗೆ ಹಾಜರಾಗಿ ಎಲ್ಲ ವಿಷಯಗಳನ್ನು ಬರೆದಿದ್ದರೂ, ‘ಹಾಜರಾಗಿಲ್ಲ’ ಎಂದು ದಾಖಲಿಸಿ ಅಂಧ ವಿದ್ಯಾರ್ಥಿನಿಯೊಬ್ಬಳನ್ನು ಫೇಲ್ ಮಾಡಿದ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬೆಳಕಿಗೆ ಬಂದಿದೆ. ಶಿರಸಿ ನಗರದ ಇಂದಿರಾ ನಗರದ ಯೂನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್ ಈ ಅನ್ಯಾಯಕ್ಕೆ ಒಳಗಾದವರು. ಈ ಘಟನೆಯು ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ದೋಷಪೂರಿತ ನಿರ್ವಹಣೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಲೀಸಾ ಖಾನಮ್ ಅಂಧ ವಿದ್ಯಾರ್ಥಿನಿಯಾಗಿದ್ದು, ನಿಯಮಾನುಸಾರ ಆಕೆಗೆ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ವಿನಾಯಿತಿ ನೀಡಿ ಅದರ ಬದಲಾಗಿ ಪೊಲಿಟಿಕಲ್ ಸೈನ್ಸ್ ಮತ್ತು ಎಕನಾಮಿಕ್ಸ್ ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಲೀಸಾ ಉರ್ದುವಿನಲ್ಲಿ 124, ಕನ್ನಡದಲ್ಲಿ 100, ಇಂಗ್ಲಿಷ್ನಲ್ಲಿ 92, ಎಕನಾಮಿಕ್ಸ್ನಲ್ಲಿ 98 ಮತ್ತು ಪೊಲಿಟಿಕಲ್ ಸೈನ್ಸ್ನಲ್ಲಿ 92 ಅಂಕಗಳನ್ನು ಗಳಿಸಿ ಒಟ್ಟು 526 ಅಂಕಗಳೊಂದಿಗೆ (84.16%) ಸಾಧನೆ ಮಾಡಿದ್ದರು. ಆದರೆ, ಸಮಾಜ ವಿಜ್ಞಾನ ಪರೀಕ್ಷೆಯನ್ನು ಬರೆದಿದ್ದರೂ ಫಲಿತಾಂಶದಲ್ಲಿ ಆ ವಿಷಯಕ್ಕೆ ‘ಅಬ್ಸೆಂಟ್’ ಎಂದು ನಮೂದಿಸಿ ಫೇಲ್ ಎಂದು ಘೋಷಿಸಲಾಗಿದೆ.
“ಅಂಧತ್ವ ಇದ್ದರೂ ತುಂಬಾ ಕಷ್ಟಪಟ್ಟು ಕೇಳಿಸಿಕೊಂಡು ಎಲ್ಲಾ ಪರೀಕ್ಷೆಗಳನ್ನು ಬರೆದಿದ್ದೇನೆ, ಆದರೂ ಹೀಗೆ ಅನ್ಯಾಯ ಮಾಡಲಾಗಿದೆ” ಎಂದು ವಿದ್ಯಾರ್ಥಿನಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಈ ಕುರಿತು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದ್ದು, ತಕ್ಷಣವೇ ಈ ಯಡವಟ್ಟನ್ನು ಸರಿಪಡಿಸಬೇಕು ಎಂದು ಪೋಷಕರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ. ಪರೀಕ್ಷಾ ಮೌಲ್ಯಮಾಪನ ಮತ್ತು ದಾಖಲೆ ನಿರ್ವಹಣೆಯಲ್ಲಿ ನಡೆಯುವ ಇಂತಹ ತಪ್ಪುಗಳು ಶಿಕ್ಷಣ ಇಲಾಖೆಯ ಜವಾಬ್ದಾರಿತನವನ್ನು ಪ್ರಶ್ನಿಸುವಂತೆ ಮಾಡಿದೆ.

