ಸುರತ್ಕಲ್ : ಸುರತ್ಕಲ್‌ನ ರಾಷ್ಟ್ರೀಯ ಹೆದ್ದಾರಿಯ ತಡಂಬೈಲು ಸುಪ್ರೀಮ್ ಹಾಲ್ ಎದುರು ಭಾನುವಾರ ತಡರಾತ್ರಿ ಎರಡು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಮೂವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಚೊಕ್ಕಬೆಟ್ಟು 8ನೇ ಬ್ಲಾಕ್ ನಿವಾಸಿ ಮುಹಮ್ಮದ್ ಅಖ್ತರ್ ಹುಸೈನ್ (25) ಎಂದು ಗುರುತಿಸಲಾಗಿದೆ.
ಮೃತ ಅಖ್ತರ್ ಹುಸೈನ್ ಅವರು ವಿದೇಶದಲ್ಲಿ (ಗಲ್ಫ್) ಉದ್ಯೋಗಿಯಾಗಿದ್ದರು. ರಜೆಯ ನಿಮಿತ್ತ ಅವರು ಕಳೆದ ಶುಕ್ರವಾರವಷ್ಟೇ ಊರಿಗೆ ಮರಳಿದ್ದರು ಎಂದು ತಿಳಿದುಬಂದಿದೆ. ಊರಿಗೆ ಬಂದ ಕೇವಲ ಎರಡೇ ದಿನಗಳಲ್ಲಿ ಈ ಭೀಕರ ಅಪಘಾತ ಸಂಭವಿಸಿರುವುದು ಅವರ ಕುಟುಂಬ ಮತ್ತು ಸ್ನೇಹಿತರಲ್ಲಿ ತೀವ್ರ ಶೋಕ ಮೂಡಿಸಿದೆ.
ಅಖ್ತರ್ ಹುಸೈನ್ ಮತ್ತು ಅವರ ಸ್ನೇಹಿತ ಮುಕ್ಕದಿಂದ ಚೊಕ್ಕಬೆಟ್ಟು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ಸುರತ್ಕಲ್‌ನಿಂದ ಮುಂಚೂರು ಕಡೆಗೆ ಹೋಗುತ್ತಿದ್ದ ಮತ್ತೊಂದು ಬೈಕ್ ಸವಾರರು ಒಮ್ಮೆಗೆ ಮುಂಚೂರು ರಸ್ತೆಯತ್ತ ತಮ್ಮ ವಾಹನವನ್ನು ತಿರುಗಿಸಿದ್ದಾರೆ. ಈ ಅನಿರೀಕ್ಷಿತ ತಿರುವಿನಿಂದಾಗಿ ಎರಡು ಬೈಕ್‌ಗಳ ನಡುವೆ ಜೋರಾಗಿ ಡಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಗಾಯಗೊಂಡಿರುವ ಮೂವರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

