ಉಡುಪಿ, ಏಪ್ರಿಲ್ 25 : ಉಡುಪಿಯಲ್ಲಿ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಸಂಸ್ಕೃತ ಕಾಲೇಜಿನ ಉಪನ್ಯಾಸಕರೊಬ್ಬರ ಮೃತದೇಹ ಶನಿವಾರ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಮೂಲತಃ ಶಿರಸಿಯವರಾದ, ಪ್ರಸ್ತುತ ಉಡುಪಿಯಲ್ಲಿ ನೆಲೆಸಿದ್ದ ಗಣಪತಿ ಭಟ್ (55) ಎಂದು ಗುರುತಿಸಲಾಗಿದೆ.
ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಗಣಪತಿ ಭಟ್ ಅವರು ಎಂ.ಜಿ.ಎಂ ಕಾಲೇಜಿನ ಬಳಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಇವರು ನಾಪತ್ತೆಯಾದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ ಇವರು ವಾಸವಿದ್ದ ಮನೆಯ ಬಾವಿಯಲ್ಲಿ ಶವ ಪತ್ತೆಯಾಗಿದ್ದು, ವೈಯಕ್ತಿಕ ಕಾರಣದಿಂದ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಲು ನೆರವಾದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದೊಂದಿಗೆ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಉಡುಪಿ ನಗರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

