ಮಂಗಳೂರು : ಉಳ್ಳಾಲದ ಮುಕ್ಕಚೇರಿಯಲ್ಲಿ 2017ರ ಅಕ್ಟೋಬರ್ 4ರಂದು ರಾತ್ರಿ ಝುಬೇರ್ ಎಂಬವರನ್ನು ತಂಡವೊಂದು ಮಾರಕಾಯುಧಗಳಿಂದ ದಾಳಿ ನಡೆಸಿ ಕೊಲೆ ಮಾಡಿತ್ತು. ಈ ದಾಳಿಯನ್ನು ತಡೆಯಲು ಹೋದ ಇಲ್ಯಾಸ್ ಎಂಬವರಿಗೂ ತಲವಾರಿನಿಂದ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಲಾಗಿತ್ತು. ಈ ಭೀಕರ ಕೃತ್ಯಕ್ಕೆ ಸಂಬಂಧಿಸಿದಂತೆ ಮುಕ್ಕಚೇರಿಯ ಅಬ್ದುಲ್ ರಹ್ಮಾನ್ ಸುಹೇಲ್ ಎಂಬ ಆರೋಪಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈಗ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಈ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಸುಹೇಲ್, ತದನಂತರ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಪೊಲೀಸರು ಈತನನ್ನು ಮತ್ತೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುನೀತಾ ಅವರು ಏಪ್ರಿಲ್ 22ರಂದು ಈ ಶಿಕ್ಷೆಯ ತೀರ್ಪನ್ನು ನೀಡಿದ್ದಾರೆ.
ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಮೂವರು ಆರೋಪಿಗಳಾದ ನಿಝಾಮ್, ತಾಜುದ್ದೀನ್ ಮತ್ತು ಮುಸ್ತಫಾ ಎಂಬವರಿಗೆ 2022ರ ಏಪ್ರಿಲ್ 20ರಂದೇ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಉಳಿದ ಇಬ್ಬರು ಆರೋಪಿಗಳಾದ ಆಸೀಫ್ ಮತ್ತು ನಾಸಿರ್ ಎಂಬವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದರೆ, ಐದನೇ ಆರೋಪಿ ಅಲ್ತಾಫ್ ಎಂಬಾತ ವಿಚಾರಣಾ ಹಂತದಲ್ಲೇ ಮೃತಪಟ್ಟಿದ್ದಾನೆ.

