Kozhikode : ಕೋಯಿಕ್ಕೋಡ್ ಜಿಲ್ಲೆಯ ಫರೋಕ್ ಸಮೀಪದ ಚುಂಗಂ ಕಲ್ಲಿತೋಡ್ ನಿವಾಸಿ ರೋಜಿತ್ ಬಂಧಿತ ಖತರ್ನಾಕ್ ಆರೋಪಿ. ಈತ ತಾನು ಆ್ಯಂಟಿ-ನಾರ್ಕೋಟಿಕ್ಸ್ ಸ್ಪೆಷಲ್ ಆಕ್ಷನ್ ಫೋರ್ಸ್ (DANSAF) ನ ಸಬ್-ಇನ್ಸ್ಪೆಕ್ಟರ್ ಎಂದು ಪೋಸು ಕೊಟ್ಟು ಹಲವು ಕಡೆಗಳಲ್ಲಿ ಯುವಕರನ್ನು ತಪಾಸಣೆ ನಡೆಸುತ್ತಿದ್ದನು. ಈ ವೇಳೆ ಅವರ ಬಳಿಯಿದ್ದ ಎಂಡಿಎಂಎ (MDMA) ಸೇರಿದಂತೆ ನಿಷೇಧಿತ ಮಾದಕ ವಸ್ತುಗಳನ್ನು ‘ಜಪ್ತಿ’ ಮಾಡಿಕೊಂಡು, ಅವರ ವಿರುದ್ಧ ಕೇಸ್ ಹಾಕದೇ ಇರಲು ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದನು. ಅಷ್ಟಕ್ಕೇ ನಿಲ್ಲದೆ, ತಾನು ಜಪ್ತಿ ಮಾಡಿಕೊಂಡಿದ್ದ ಅದೇ ಡ್ರಗ್ಸ್ ಅನ್ನು ಬೇರೆ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಭಾರಿ ಹಣ ಸಂಪಾದಿಸುತ್ತಿದ್ದನು.
ಕೋಯಿಕ್ಕೋಡ್ ನಗರದ ವಿವಿಧ ಭಾಗಗಳಿಂದ ಸಬ್-ಇನ್ಸ್ಪೆಕ್ಟರ್ ಹೆಸರಲ್ಲಿ ಸುಲಿಗೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಅಸಲಿ ಡಾನ್ಸಾಫ್ (DANSAF) ತಂಡ ಮತ್ತು ಫರೋಕ್ ಪೊಲೀಸರು ತೀವ್ರ ನಿಗಾ ವಹಿಸಿ ಕಾರ್ಯಾಚರಣೆ ನಡೆಸಿದರು. ಗುರುವಾರ ರಾತ್ರಿ ರಾಮನಾಟ್ಟುಕರದ ವೈದ್ಯರಂಗಾಡಿಯಲ್ಲಿ ರೋಜಿತ್ನನ್ನು ಸುತ್ತುವರಿದು ಬಂಧಿಸಲಾಗಿದೆ. ಬಂಧನದ ವೇಳೆ ಆತನಿಂದ 2.5 ಗ್ರಾಂ ಎಂಡಿಎಂಎ, ಕೈಕೋಳ (Handcuffs), ಏರ್ ಪಿಸ್ತೂಲ್, ನಕಲಿ ಪೊಲೀಸ್ ಐಡಿ ಕಾರ್ಡ್ಗಳು ಹಾಗೂ ಪೊಲೀಸ್ ಸಮವಸ್ತ್ರ ಧರಿಸಿದ್ದ ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ಜಪ್ತಿ ಮಾಡಲಾಗಿದೆ. ಆತನ ಬ್ಯಾಂಕ್ ಖಾತೆಗಳು, ಹಣಕಾಸು ವ್ಯವಹಾರ ಹಾಗೂ ಡ್ರಗ್ ಪೆಡ್ಲರ್ಗಳ ಜಾಲದ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನು ಓದಿ : Nepal : ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯ ಶವದಿಂದ ಚಿನ್ನದ ಓಲೆ ಕದ್ದ ಇಬ್ಬರು ಪಾಪಿಗಳು ಅರೆಸ್ಟ್!