ವಾಷಿಂಗ್ಟನ್ : ವಾಷಿಂಗ್ಟನ್‌ನಲ್ಲಿ ಮಾತನಾಡಿದ ಟ್ರಂಪ್, ಇರಾನ್ ಮೇಲಿನ ಅಮೆರಿಕದ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ದೊಡ್ಡ ಮಟ್ಟದ ಯಶಸ್ಸು ಕಂಡಿದೆ ಎಂದಿದ್ದಾರೆ. ಮುಂದಿನ 2-3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ ನಡೆಸಲಿದ್ದೇವೆ. ಒಂದು ವೇಳೆ ಇರಾನ್ ಮಾತುಕತೆಗೆ ಒಪ್ಪದಿದ್ದರೆ, ಅಲ್ಲಿನ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳ (Power Plants) ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಧ್ವಂಸಗೊಳಿಸುತ್ತೇವೆ ಎಂದು ಗುಡುಗಿದ್ದಾರೆ. “ಅವರನ್ನು ಅವರು ಇರಬೇಕಾದ ಶಿಲಾಯುಗಕ್ಕೆ ಮರಳಿ ಕಳುಹಿಸುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ಶಕ್ತಿ ಕುಂಠಿತ: ಕಳೆದ ಒಂದು ತಿಂಗಳಿನಿಂದ ನಡೆಸಿದ ದಾಳಿಯಿಂದ ಇರಾನ್‌ನ ನೌಕಾಪಡೆ ಮತ್ತು ವಾಯುಪಡೆ ಸಂಪೂರ್ಣ ದುರ್ಬಲಗೊಂಡಿದೆ. ಇರಾನ್‌ನ ಕ್ಷಿಪಣಿ ಉಡಾವಣಾ ಸಾಮರ್ಥ್ಯ ಮತ್ತು ಡ್ರೋನ್ ದಾಳಿಯ ಶಕ್ತಿ ಶೇ.90 ರಷ್ಟು ನಾಶವಾಗಿದೆ. ಅವರ ಶಸ್ತ್ರಾಸ್ತ್ರ ಕಾರ್ಖಾನೆಗಳು ಈಗ ಕೇವಲ ಅವಶೇಷಗಳಾಗಿವೆ ಎಂದು ಟ್ರಂಪ್ ವಿವರಿಸಿದ್ದಾರೆ. ಅಲ್ಲದೆ, ಇರಾನ್‌ನ ಮೂಲ ನಾಯಕನ (ಸುಪ್ರೀಂ ಲೀಡರ್) ಸಾವು ಅಲ್ಲಿನ ಆಡಳಿತ ಬದಲಾವಣೆಗೆ (Regime Change) ನಾಂದಿ ಹಾಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅರಬ್ ರಾಷ್ಟ್ರಗಳಿಗೆ ಧನ್ಯವಾದ ಮತ್ತು ತೈಲ ರಾಜಕೀಯ: ಇಸ್ರೇಲ್, ಸೌದಿ ಅರೇಬಿಯಾ, ಖತಾರ್, ಯುಎಇ ಮತ್ತು ಬಹ್ರೇನ್ ರಾಷ್ಟ್ರಗಳು ನೀಡಿದ ಬೆಂಬಲಕ್ಕೆ ಟ್ರಂಪ್ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ ಗಲ್ಫ್ ರಾಷ್ಟ್ರಗಳ ತೈಲವನ್ನು ಅವಲಂಬಿಸಿರುವ ದೇಶಗಳಿಗೆ ಕಠಿಣ ಸಂದೇಶ ನೀಡಿದ ಅವರು, “ಇನ್ನು ಮುಂದೆ ಅಮೆರಿಕದ ತೈಲವನ್ನೇ ಖರೀದಿಸಿ, ಗಲ್ಫ್ ತೈಲದ ಮೇಲಿನ ಅವಲಂಬನೆ ಕಡಿಮೆ ಮಾಡಿ” ಎಂದು ಕರೆ ನೀಡಿದ್ದಾರೆ. ಅಲ್ಲದೆ, ಸ್ಟ್ರೈಟ್ ಆಫ್ ಹಾರ್ಮುಜ್ (Strait of Hormuz) ಸಂರಕ್ಷಣೆಗೆ ಆಯಾ ದೇಶಗಳೇ ಧೈರ್ಯ ತೋರಿ ಮುಂದೆ ಬರಬೇಕು ಎಂದು ಟ್ರಂಪ್ ಹೇಳಿದ್ದಾರೆ.

