ಇಸ್ಲಾಮಾಬಾದ್ (ಎ.16) : ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಸ್ಥಾಪಕ ಸದಸ್ಯರಲ್ಲಿ ಒಬ್ಬನಾದ ಅಮೀರ್ ಹಮ್ಜಾ (Amir Hamza) ಮೇಲೆ ಲಾಹೋರ್‌ನಲ್ಲಿ ಅಜ್ಞಾತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಮ್ಜಾ ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ವರದಿಯಾಗಿದೆ.
ಸುದ್ದಿ ವಾಹಿನಿ ಕಚೇರಿ ಮುಂದೆ ದಾಳಿ: ಲಭ್ಯವಿರುವ ಮಾಹಿತಿಯ ಪ್ರಕಾರ, ಲಾಹೋರ್‌ನ ಸುದ್ದಿ ವಾಹಿನಿಯೊಂದರ ಕಚೇರಿಯ ಹೊರಗೆ ಅಜ್ಞಾತ ದುಷ್ಕರ್ಮಿಗಳು ಹಮ್ಜಾ ಮೇಲೆ ಏಕಾಏಕಿ ಗುಂಡಿನ ಮಳೆಗೆರೆದಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಹಮ್ಜಾ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲೂ ಲಾಹೋರ್‌ನ ಆತನ ನಿವಾಸದ ಹೊರಗೆ ಗುಂಡಿನ ದಾಳಿ ನಡೆದಿತ್ತು. ಅಂದಿನಿಂದ ಆತನಿಗೆ ಪಾಕ್ ಅಧಿಕಾರಿಗಳು ಹೆಚ್ಚಿನ ಭದ್ರತೆ ಒದಗಿಸಿದ್ದರೂ, ಈಗ ಮತ್ತೆ ಗುಂಡಿನ ದಾಳಿ ನಡೆದಿರುವುದು ಪಾಕಿಸ್ತಾನದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದೆ.
ಯಾರು ಈ ಅಮೀರ್ ಹಮ್ಜಾ?
1959ರಲ್ಲಿ ಗುಜ್ರಾನ್ವಾಲಾದಲ್ಲಿ ಜನಿಸಿದ ಅಮೀರ್ ಹಮ್ಜಾ, ಲಷ್ಕರ್-ಎ-ತೈಬಾದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬ. 1985-86ರ ಅವಧಿಯಲ್ಲಿ ಹಾಫಿಜ್ ಸಯೀದ್ ಜೊತೆಗೂಡಿ ಈ ಭಯೋತ್ಪಾದಕ ಸಂಘಟನೆಯನ್ನು ಸ್ಥಾಪಿಸಿದ್ದನು. ವಿಶೇಷವೆಂದರೆ, 2005ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಯೋಜನೆಯಲ್ಲಿ ಹಮ್ಜಾ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಕಾಶ್ಮೀರದ ಹೊರಗೆ ಲಷ್ಕರ್ ನಡೆಸಿದ ಮೊದಲ ಪ್ರಮುಖ ದಾಳಿಗಳಲ್ಲಿ ಇದು ಒಂದಾಗಿತ್ತು.
ಅಮೆರಿಕದಿಂದ ನಿರ್ಬಂಧಿತ ಉಗ್ರ: ಹಾಫಿಜ್ ಸಯೀದ್ ನಂತರ ಲಷ್ಕರ್‌ನ ಎರಡನೇ ಪ್ರಮುಖ ನಾಯಕ ಎಂದು ಪರಿಗಣಿಸಲ್ಪಟ್ಟಿರುವ ಹಮ್ಜಾ, ಸಂಘಟನೆಯ ಪ್ರಚಾರ ವಿಭಾಗ (Propaganda wing) ಮತ್ತು ಹಣ ಸಂಗ್ರಹಣೆಯಲ್ಲಿ ಸಕ್ರಿಯನಾಗಿದ್ದನು. ಈ ಕಾರಣಕ್ಕಾಗಿಯೇ ಅಮೆರಿಕದ ಖಜಾನೆ ಇಲಾಖೆ (US Treasury Department) ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿ ನಿರ್ಬಂಧ ವಿಧಿಸಿದೆ. ಹಮ್ಜಾ ಲಷ್ಕರ್‌ನ ಸಾಪ್ತಾಹಿಕ ಪತ್ರಿಕೆಯ ಸಂಪಾದಕನಾಗಿಯೂ ಕೆಲಸ ಮಾಡಿದ್ದು, ಉಗ್ರಗಾಮಿ ವಿಚಾರಧಾರೆಗಳನ್ನು ಹರಡುವಲ್ಲಿ ಕುಖ್ಯಾತಿ ಪಡೆದಿದ್ದಾನೆ.
ಲಷ್ಕರ್‌ನಿಂದ ದೂರವಾಗಿದ್ದ ಹಮ್ಜಾ: 2018ರಲ್ಲಿ ಲಷ್ಕರ್‌ನ ಹಣಕಾಸು ಮೂಲಗಳ ಮೇಲೆ ಜಾಗತಿಕ ಮಟ್ಟದಲ್ಲಿ ಕಠಿಣ ಕ್ರಮಗಳು ಜಾರಿಯಾದಾಗ, ಹಮ್ಜಾ ಮೂಲ ಸಂಘಟನೆಯಿಂದ ದೂರ ಸರಿದು ‘ಜೈಶ್-ಎ-ಮಂಕಫಾ’ ಎಂಬ ಹೊಸ ಗುಂಪನ್ನು ಕಟ್ಟಿಕೊಂಡಿದ್ದನು. ಈ ಗುಂಪು ಪ್ರಮುಖವಾಗಿ ಕಾಶ್ಮೀರವನ್ನು ಗುರಿಯಾಗಿಸಿಕೊಂಡು ಪ್ರಚಾರ ಮತ್ತು ಹಣ ಸಂಗ್ರಹಣೆಯಲ್ಲಿ ತೊಡಗಿತ್ತು. ಆದರೂ, ಅಮೆರಿಕದ ದೃಷ್ಟಿಯಲ್ಲಿ ಈತ ಇಂದಿಗೂ ಲಷ್ಕರ್‌ನ ಪ್ರಮುಖ ಸಂಚುಕೋರನಾಗಿಯೇ ಗುರುತಿಸಲ್ಪಟ್ಟಿದ್ದಾನೆ. ಸದ್ಯ ಲಾಹೋರ್‌ನಲ್ಲಿ ನಡೆದ ಈ ದಾಳಿಯು ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳ ಭಾಗವೇ ಎಂಬ ಚರ್ಚೆ ಶುರುವಾಗಿದೆ.

