ಬೆಂಗಳೂರು : ಬೆಂಗಳೂರಿನಲ್ಲಿ ಮಾದಕ ದ್ರವ್ಯ ದಂಧೆಯ ವಿರುದ್ಧ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಗುರುವಾರ ಪ್ರಕಟಿಸಿದ್ದಾರೆ. ಬಂಧಿತ ವಿದೇಶಿಯರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.
23 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ: ಈ ಭಾರಿ ಕಾರ್ಯಾಚರಣೆಯ ಮೂಲಕ ಪೊಲೀಸರು ಭಾರಿ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ 5 ಕೆಜಿ ಎಂಡಿಎಂಎ (MDMA – Crystal), 1 ಕೆಜಿ ಕೊಕೇನ್ (Cocaine), 21 ಕೆಜಿ ಗಾಂಜಾ ಮತ್ತು 19 ಗ್ರಾಂ ಎಕ್ಸ್‌ಟಸಿ ಮಾತ್ರೆಗಳನ್ನು (Ecstasy Pills) ಜಪ್ತಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ಅಪರಾಧ ಎಸಗಲು ಬಳಸಿದ್ದ ದ್ವಿಚಕ್ರ ವಾಹನವನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಲಾದ ಮಾದಕ ದ್ರವ್ಯಗಳ ಅಸಲಿ ಮೌಲ್ಯ 11.81 ಕೋಟಿ ರೂಪಾಯಿಗಳಾಗಿದ್ದು, ಇವುಗಳ ಅಂದಾಜು ಮಾರುಕಟ್ಟೆ ಮೌಲ್ಯ (Market Value) 23.63 ಕೋಟಿ ರೂಪಾಯಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಯಲಹಂಕ, ಕೋರಮಂಗಲ ಸೇರಿ ವಿವಿಧೆಡೆ ದಾಳಿ: ವಿಶ್ವಾಸಾರ್ಹ ಮಾಹಿತಿಯ ಮೇರೆಗೆ, ಪೊಲೀಸರು ಯಲಹಂಕ ನ್ಯೂ ಟೌನ್, ಡಿ ಜೆ ಹಳ್ಳಿ, ಕೋರಮಂಗಲ, ಬೊಮ್ಮನಹಳ್ಳಿ ಮತ್ತು ಪುಲಕೇಶಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದರು. ಈ ಪ್ರದೇಶಗಳಲ್ಲಿ ಎಂಡಿಎಂಎ, ಕೊಕೇನ್, ಗಾಂಜಾ ಮತ್ತು ಎಕ್ಸ್‌ಟಸಿ ಮಾತ್ರೆಗಳ ಮಾರಾಟ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯ ಆಧಾರದ ಮೇಲೆ, ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ (NDPS – Narcotic Drugs and Psychotropic Substances) ಕಾಯ್ದೆಯಡಿ ಪ್ರಕರಣ ದಾಖಲಿಸಿ, ಗುರುತಿಸಲಾದ ಸ್ಥಳಗಳಲ್ಲಿ ದಾಳಿ ನಡೆಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್: ವಿಚಾರಣೆಯ ಸಂದರ್ಭದಲ್ಲಿ, ಬಂಧಿತ ಆರೋಪಿಗಳು ಶೀಘ್ರವಾಗಿ ಹಣ ಗಳಿಸುವ ಉದ್ದೇಶದಿಂದ ಈ ದಂಧೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರು ವಿದೇಶಿ, ಅಂತಾರಾಜ್ಯ ಮತ್ತು ಸ್ಥಳೀಯ ಅಪರಿಚಿತ ಸರಬರಾಜುದಾರರಿಂದ ಕಡಿಮೆ ಬೆಲೆಗೆ ಮಾದಕ ದ್ರವ್ಯಗಳನ್ನು ಖರೀದಿಸುತ್ತಿದ್ದರು. ನಂತರ ಅವುಗಳನ್ನು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಬಂಧಿತ ಎಲ್ಲಾ 10 ಆರೋಪಿಗಳನ್ನು ವಿವಿಧ ದಿನಾಂಕಗಳಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿದೆ. ಈ ಮಾದಕ ದ್ರವ್ಯಗಳನ್ನು ಸರಬರಾಜು ಮಾಡುವಲ್ಲಿ ತೊಡಗಿರುವ ವಿದೇಶಿ ಮತ್ತು ಅಂತಾರಾಜ್ಯ ಸರಬರಾಜುದಾರರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : Bangalore : ಲವ್ ಜಿಹಾದ್ ಆರೋಪ, ಮದುವೆಯಾಗಲ್ಲ ಅಂದಿದ್ದಕ್ಕೆ ಹಿಂದೂ ನಟಿ ಮೇಲೆ ಹಲ್ಲೆ ಮಾಡಿದ ಜುಹೇದ್!

