ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಚರ್ಚೆಗೆ ಕಾರಣವಾಗಿದೆ. ನಟ ಯಶ್ ನೀಡಿದ ವಿದೇಶಿ ಮಾಧ್ಯಮ ಸಂದರ್ಶನದ ಕೆಲವು ಭಾಗಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಚಿತ್ರಕಥೆಯ ಬಗ್ಗೆ ಹೊಸ ಕುತೂಹಲಗಳನ್ನು ಹುಟ್ಟುಹಾಕಿದೆ.
ತಂದೆ-ಮಗನ ನಡುವಿನ ಸೇಡಿನ ಕಥೆ? ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿರುವ ಈ ಚಿತ್ರವು ಯಶ್ ಅವರ ಮುಂದಿನ ದೊಡ್ಡ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಆಗಿ ಗಮನ ಸೆಳೆಯುತ್ತಿದೆ. ‘ಕೆಜಿಎಫ್ ಚಾಪ್ಟರ್ 2’ ನಂತರ ಅಭಿಮಾನಿಗಳ ನಿರೀಕ್ಷೆ ಆಕಾಶದಷ್ಟಿದೆ. ವೈರಲ್ ಆಗಿರುವ ಸಂದರ್ಶನದ ಕ್ಲಿಪ್ ಪ್ರಕಾರ, ಯಶ್ ಈ ಚಿತ್ರವು ಕೇವಲ ಸಾಮಾನ್ಯ ಗ್ಯಾಂಗ್‌ಸ್ಟರ್ ಕಥೆಯಲ್ಲ, ಬದಲಿಗೆ ತಂದೆ–ಮಗನ ನಡುವಿನ ಸೇಡು ಮತ್ತು ತೀವ್ರ ಭಾವನಾತ್ಮಕ ಸಂಘರ್ಷದ ಹಿನ್ನೆಲೆಯ ಕಥೆಯಾಗಿದೆ ಎಂಬ ಸುಳಿವು ನೀಡಿದ್ದಾರೆ.
1961ರ ಗೋವಾ ಕಾಲಘಟ್ಟ: ಇನ್ನೊಂದು ಪ್ರಮುಖ ಅಂಶವೆಂದರೆ, ಈ ಕಥೆಯು 1961ರ ಕಾಲಘಟ್ಟದಲ್ಲಿ ಪೋರ್ಚುಗೀಸ್ ಆಳ್ವಿಕೆಯಲ್ಲಿದ್ದ ಗೋವಾ ಹಿನ್ನೆಲೆಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದು ಚಿತ್ರಕ್ಕೆ ಹಿಸ್ಟಾರಿಕಲ್ ಮತ್ತು ಆಕ್ಷನ್ ಟಚ್ ನೀಡುವ ಸಾಧ್ಯತೆ ಇದೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ಸಂದರ್ಶನದ ಈ ಭಾಗಗಳು ವೈರಲ್ ಆದ ನಂತರ ಅಭಿಮಾನಿಗಳಲ್ಲಿ ಸಿನಿಮಾ ಕುರಿತು ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಆದರೆ ಚಿತ್ರ ತಂಡದಿಂದ ಕಥೆ ಅಥವಾ ಪಾತ್ರಗಳ ಕುರಿತು ಅಧಿಕೃತವಾಗಿ ಯಾವುದೇ ಹೆಚ್ಚಿನ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

