ಬೆಂಗಳೂರು, ಏಪ್ರಿಲ್ 30 : ಶಾಲೆ ಮತ್ತು ಕಾಲೇಜುಗಳ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡುತ್ತಿರುವುದು ಕಂಡುಬಂದಿದ್ದು, ಇದು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ. ಅಲ್ಲದೆ, ಇಂತಹ ಕೃತ್ಯಗಳು ಶಿಕ್ಷಣ ಸಂಸ್ಥೆಗಳ ಘನತೆಗೆ ಧಕ್ಕೆ ತರುವುದಲ್ಲದೆ, ಶಿಸ್ತಿನ ಮಿತಿ ಮೀರಲು ಕಾರಣವಾಗುತ್ತಿದೆ ಎಂದು ಇಲಾಖೆ ಎಚ್ಚರಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಇನ್ನು ಮುಂದೆ ಅಶ್ಲೀಲ ಹಾಡುಗಳಿಗೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಇಂತಹ ನೃತ್ಯಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿ, ಅಶ್ಲೀಲ ಹಾಡುಗಳಿಗೆ ಕುಣಿತವನ್ನು ಪ್ರೋತ್ಸಾಹಿಸುವ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಅಶ್ಲೀಲ ಹಾಡುಗಳ ಬದಲು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ನೈತಿಕ ಮೌಲ್ಯಗಳು, ಪರಸ್ಪರ ಗೌರವ, ಸೋದರತ್ವ ಮತ್ತು ಸ್ಫೂರ್ತಿಯನ್ನು ತುಂಬುವಂತಹ ಹಾಡುಗಳನ್ನು ಆಯ್ಕೆ ಮಾಡುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸಲಹೆ ನೀಡಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರೇಪಿಸುವಂತೆ ತಿಳಿಸಲಾಗಿದೆ.

