ನವದೆಹಲಿ : ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಬ್ಯಾಂಕ್ ಖಾತೆಗಳು ಹಾಗೂ ವಿದೇಶಗಳಲ್ಲಿ ಅವರು ಹೊಂದಿರುವ ಕ್ರಿಪ್ಟೋಕರೆನ್ಸಿ ಸಂಪತ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ದೆಹಲಿ ಹೈಕೋರ್ಟ್ ಗುರುವಾರ ಆದೇಶಿಸಿದೆ. ಕರೀಷ್ಮಾ ಕಪೂರ್ ಅವರ ಮಕ್ಕಳಾದ ಕಿಯಾನ್ ಮತ್ತು ಸಮೈರಾ ಸಲ್ಲಿಸಿದ್ದ ಮಧ್ಯಂತರ ಪರಿಹಾರ ಕೋರಿಕೆಯ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು, ಆಸ್ತಿಗಳನ್ನು ಸಂರಕ್ಷಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ. ಈ ಆಸ್ತಿಗಳನ್ನು ಮಾರಾಟ ಮಾಡಬಾರದು, ಹಂಚಿಕೆ ಮಾಡಬಾರದು ಅಥವಾ ಯಾರಿಗೂ ವರ್ಗಾವಣೆ ಮಾಡಬಾರದು ಎಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕಳೆದ ವರ್ಷ ಜೂನ್ನಲ್ಲಿ ಲಂಡನ್ನಲ್ಲಿ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರು ಸುಮಾರು 30,000 ಕೋಟಿ ರೂಪಾಯಿ ಮೌಲ್ಯದ ಭಾರಿ ಆಸ್ತಿಯನ್ನು ಬಿಟ್ಟುಹೋಗಿದ್ದಾರೆ. ಇದೀಗ ಆಸ್ತಿಯ ಹಕ್ಕಿಗಾಗಿ ಸಂಜಯ್ ಅವರ ಮೂರನೇ ಪತ್ನಿ ಪ್ರಿಯಾ ಸಚ್ದೇವ್ ಕಪೂರ್ ಹಾಗೂ ಕರೀಷ್ಮಾ ಕಪೂರ್ ಅವರ ಮಕ್ಕಳ ನಡುವೆ ಕಾನೂನು ಸಮರ ಏರ್ಪಟ್ಟಿದೆ. ವಿವಾದವು ತಾರಕಕ್ಕೇರಿದ್ದು, ನ್ಯಾಯಾಲಯದ ಮೊರೆ ಹೋಗಲಾಗಿದೆ.
ಕಿಯಾನ್ ಮತ್ತು ಸಮೈರಾ ಅವರು ಸಂಜಯ್ ಕಪೂರ್ ಹೆಸರಿನಲ್ಲಿರುವ ವಿಲ್ (Will) ನಕಲು ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಆಸ್ತಿಯ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ದೂರಿದ್ದಾರೆ. ಪ್ರಮುಖವಾಗಿ, ದುಬಾರಿ ಪೋಲೋ ಕುದುರೆಗಳು ಹಾಗೂ ಆಡೆಮರ್ಸ್ ಪಿಗುಯೆಟ್ ಮತ್ತು ರೋಲೆಕ್ಸ್ನಂತಹ ಐಷಾರಾಮಿ ಕೈಗಡಿಯಾರಗಳನ್ನು ಆಸ್ತಿ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ ಎಂಬುದು ಮಕ್ಕಳ ಆರೋಪವಾಗಿದೆ.
ಕರೀಷ್ಮಾ ಕಪೂರ್ ಅವರ ಮಕ್ಕಳು ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದ್ದಾರೆ. ಇದನ್ನು ಗಮನಿಸಿದ ನ್ಯಾಯಾಲಯವು, ವಿಲ್ನ ಸತ್ಯಾಸತ್ಯತೆಯನ್ನು ಸಾಬೀತುಪಡಿಸುವ ಹೊಣೆಗಾರಿಕೆಯು ಪ್ರಿಯಾ ಕಪೂರ್ ಅವರ ಮೇಲಿದೆ ಎಂದು ತಿಳಿಸಿದೆ. ಈ ಮೂಲಕ ಸಂಜಯ್ ಕಪೂರ್ ಅವರ ಆಸ್ತಿ ವಿವಾದವು ಇದೀಗ ಮತ್ತೊಂದು ರೋಚಕ ಹಂತಕ್ಕೆ ತಲುಪಿದೆ.

