ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯದ ಬಾಳೆಮಂಡಿಕಲ್ಲು ನಿವಾಸಿ ದಿನೇಶ್ ನಾಯ್ಕ್ ಮತ್ತು ರೇವತಿ ದಂಪತಿಯ ಪುತ್ರಿ ರಮ (19) ಮೃತಪಟ್ಟ ದುರ್ದೈವಿ. ಈಕೆ ವಾಮದಪದವು ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಶಿಕ್ಷಣ ಪಡೆಯುತ್ತಿದ್ದಳು. ಎಪ್ರಿಲ್ 19 ರಂದು ರಾತ್ರಿ ಮನೆಯಲ್ಲಿ ಇದ್ದಕ್ಕಿದ್ದಂತೆ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಎಪ್ರಿಲ್ 29 ರಂದು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಕಾರಣವೇನು?
ಮೃತ ರಮ ಅವರು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಕಾರಣದಿಂದಲೇ ಆಕೆ ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಂಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಸದ್ಯದ ಮಾಹಿತಿಯ ಪ್ರಕಾರ, ಪ್ರೇಮ ವೈಫಲ್ಯದ ಕಾರಣದಿಂದಲೇ ಆಕೆ ಇಂತಹ ದುರ್ನಿರ್ಧಾರಕ್ಕೆ ಬಂದಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಎಪ್ರಿಲ್ 30 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪ್ರಸ್ತುತ ಪೊಲೀಸರು ಘಟನೆಯ ಸುತ್ತಮುತ್ತಲಿನ ಮಾಹಿತಿ ಕಲೆಹಾಕುತ್ತಿದ್ದು, ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಮಗಳ ಸಾವಿನಿಂದಾಗಿ ದಿನೇಶ್ ನಾಯ್ಕ್ ಮತ್ತು ರೇವತಿ ದಂಪತಿ ತೀವ್ರ ಶೋಕದಲ್ಲಿದ್ದಾರೆ.

