ಬಂಟ್ವಾಳ, ಮೇ 4: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾನ್ಚಿ ಗ್ರಾಮದ ಪಂಜಳದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಜಾಲ ಪತ್ತೆಯಾಗಿದೆ. ಬೊಲೆರೋ ವಾಹನದಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು, ಸಾಲೆತ್ತೂರು ಕಡೆಯಿಂದ ಬಂದ ವಾಹನವನ್ನು ತಡೆದು ತಪಾಸಣೆ ನಡೆಸಿದರು. ಈ ವೇಳೆ ಸುಮಾರು 42.30 ಲಕ್ಷ ರೂಪಾಯಿ ಮೌಲ್ಯದ 423 ಗ್ರಾಂ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ.
ಬಂಧಿತರನ್ನು ಬಂಟ್ವಾಳದ ಬೋಳಂತೂರು ನಿವಾಸಿಗಳಾದ ಮೊಹಮ್ಮದ್ ನಿಜಾಮುದ್ದೀನ್ (30) ಮತ್ತು ಆತನ ತಮ್ಮ ಮೊಹಮ್ಮದ್ ಶಾಹೀಮ್ (19) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಅಪರಿಚಿತ ನೈಜೀರಿಯನ್ ವ್ಯಕ್ತಿಯೊಬ್ಬನಿಂದ ಡ್ರಗ್ಸ್ ಖರೀದಿಸಿ, ಅದನ್ನು ಬಂಟ್ವಾಳಕ್ಕೆ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರು ಆರೋಪಿಗಳಿಂದ 42.30 ಲಕ್ಷ ಮೌಲ್ಯದ 423 ಗ್ರಾಂ ಎಂಡಿಎಂಎ, ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನ ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಲಾದ ಒಟ್ಟು ಸೊತ್ತಿನ ಮೌಲ್ಯ ಸುಮಾರು 46.25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡ್ರಗ್ಸ್ ಜಾಲದ ಹಿಂದೆ ಇನ್ನೆಷ್ಟು ಜನರಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

