Homeತಾಜಾ ಸುದ್ದಿBengaluru | ಬೆಂಗಳೂರಿನಲ್ಲಿ ಮಳೆರಾಯನ ಮೃತ್ಯು ನರ್ತನ : ವರುಣನ ಬಿರುಗಾಳಿಗೆ 10 ಜೀವಗಳು ಬಲಿ...

Bengaluru | ಬೆಂಗಳೂರಿನಲ್ಲಿ ಮಳೆರಾಯನ ಮೃತ್ಯು ನರ್ತನ : ವರುಣನ ಬಿರುಗಾಳಿಗೆ 10 ಜೀವಗಳು ಬಲಿ – ತಾಯಿಯ ಕಣ್ಣೆದುರೇ ಮಗನ ದುರಂತ ಸಾವು!

ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭೀಕರ ಮಳೆ ಅಕ್ಷರಶಃ ಮೃತ್ಯುರೂಪಿಯಾಗಿ ಅಪ್ಪಳಿಸಿದ್ದು, ನಗರದ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿ ಉಳಿಯುವಂತಹ ದುರಂತದಲ್ಲಿ ಹತ್ತು ಮಂದಿ ಅಸುನೀಗಿದ್ದಾರೆ. ತಿಂಗಳಿನಿಂದ ಸುಡುತ್ತಿದ್ದ ಬಿಸಿಲ ಬೇಗೆಯಿಂದ ತಂಪನ್ನು ನಿರೀಕ್ಷಿಸುತ್ತಿದ್ದ ಬೆಂಗಳೂರಿಗರಿಗೆ, ವರುಣನ ಆರ್ಭಟವು ಅನಿರೀಕ್ಷಿತ ಸಾವು-ನೋವನ್ನು ತಂದೊಡ್ಡಿದೆ. ಕೇವಲ ಅರ್ಧ ಗಂಟೆಯ ಅಬ್ಬರಕ್ಕೆ ಗೋಡೆ ಕುಸಿತ, ವಿದ್ಯುತ್ ಸ್ಪರ್ಶ ಮತ್ತು ಸಿಮೆಂಟ್ ಶೀಟ್ ಬಿದ್ದ ಪರಿಣಾಮ ಹತ್ತು ಜೀವಗಳು ಬಲಿಯಾಗಿದ್ದು, ನಗರದ ಮೂಲಸೌಕರ್ಯದ ವೈಫಲ್ಯವನ್ನು ಈ ಮಳೆ ಬೆತ್ತಲೆ ಮಾಡಿದೆ.

ನಗರದ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಶವಗಾರದ ಬಳಿ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಳೆಯ ತೀವ್ರತೆಗೆ ಜರ್ಜರಿತವಾಗಿದ್ದ ಈ ಗೋಡೆ ಏಕಾಏಕಿ ಕುಸಿದಿದ್ದೇ ಈ ಮಹಾ ದುರಂತಕ್ಕೆ ಕಾರಣವಾಯಿತು. ಇದೇ ಗೋಡೆ ಕುಸಿತದ ರಭಸಕ್ಕೆ ಸಮೀಪದ ಬೆಸ್ಕಾಂ ವಿದ್ಯುತ್ ಕಂಬ ಜಖಂಗೊಂಡು ತಂತಿಗಳು ಹರಿದು ಬಿದ್ದಿದ್ದು, ಇದೇ ವೇಳೆ ತಾಯಿಯೊಂದಿಗೆ ಬಟ್ಟೆ ಖರೀದಿಗೆ ಬಂದಿದ್ದ ಕೆ.ಜಿ. ಹಳ್ಳಿಯ 17 ವರ್ಷದ ಬಾಲಕ ಸೈಯದ್ ಸೂಫಿಯಾನ್, ವಾಹನ ಪಾರ್ಕ್ ಮಾಡಲು ಹೋದಾಗ ವಿದ್ಯುತ್ ತಂತಿ ತಗುಲಿ ತಾಯಿಯ ಕಣ್ಣೆದುರೇ ಪ್ರಾಣಬಿಟ್ಟಿದ್ದಾನೆ. ಮಗನ ಈ ಅಕಾಲಿಕ ಮರಣದಿಂದ ತೀವ್ರ ಆಘಾತಕ್ಕೊಳಗಾದ ತಾಯಿ ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದುರಂತದ ಸರಣಿ ಇಷ್ಟಕ್ಕೇ ನಿಲ್ಲಲಿಲ್ಲ; ಮೈಸೂರು ರಸ್ತೆಯ ಕಸ್ತೂರಿ ಬಾಯಿನಗರದ ಅಶ್ವತ್ ಕಟ್ಟೆ ರಸ್ತೆಯ ನಿವಾಸಿ ಮಂಜು (35) ಎಂಬುವವರು ಮನೆಯಲ್ಲಿದ್ದಾಗ ಗೋಡೌನ್‌ನಿಂದ ಹಾರಿ ಬಂದ ಸಿಮೆಂಟ್ ಶೀಟ್ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿರುಗಾಳಿಯ ಆರ್ಭಟಕ್ಕೆ ಗೋಡೌನ್ ಶೀಟ್‌ಗಳು ಹಾರಿಹೋಗಿ ಹಲವು ಮನೆಗಳಿಗೆ ಹಾನಿಯುಂಟಾಗಿದೆ. ಇನ್ನು ಜೆ.ಪಿ. ನಗರದ ಸಾರಕ್ಕಿ ಬಸ್ ನಿಲ್ದಾಣದ ಬಳಿ ವಿದ್ಯುತ್ ಕಂಬದ ಪಕ್ಕ ನಿಂತಿದ್ದ ಜೆ.ಡಿ. ಮಾರಾ ಸ್ಲಂ ನಿವಾಸಿ ರಘು (35) ಎಂಬುವವರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.

ಈ ಮಳೆಯು ಕಳೆದ 25 ವರ್ಷಗಳ ದಾಖಲೆಯನ್ನು ಮುರಿದಿದೆ. ನಗರದಲ್ಲಿ ಬರೋಬ್ಬರಿ 111 ಮಿ.ಮೀ ಮಳೆಯಾಗಿದ್ದು, ಇದು ಕಳೆದ 25 ವರ್ಷಗಳಲ್ಲೇ ದಾಖಲಾದ ಗರಿಷ್ಠ ಮಳೆಯಾಗಿದೆ. 2001ರಲ್ಲಿ 118 ಮಿ.ಮೀ ಮಳೆಯಾಗಿದ್ದ ದಾಖಲೆಯನ್ನು ಸರಿಗಟ್ಟುವಂತೆ ಸುರಿದ ಈ ಮಳೆ, ನಗರದ ಅಭಿವೃದ್ಧಿಯ ಮರೀಚಿಕೆಯನ್ನು ಸಾಬೀತುಪಡಿಸಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments