ಉಡುಪಿ : ಕಾರ್ಕಳದ ಸುದೀಪ್ ಶೆಟ್ಟಿ ಅವರು ಕಳೆದ ಮಾರ್ಚ್ 22ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಾವಿಗೆ ಪತ್ನಿ ಸೌಮ್ಯ ಶೆಟ್ಟಿಯವರೇ ನೇರ ಕಾರಣ ಮತ್ತು ಅವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಸುದೀಪ್ ಅವರ ತಂದೆ ದಾಮೋದರ್ ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಸೌಮ್ಯ ಶೆಟ್ಟಿಯನ್ನು ಏಪ್ರಿಲ್ 11ರಂದು ಉಡುಪಿಯಲ್ಲಿ ಬಂಧಿಸಿದ್ದರು.
ಪೊಲೀಸ್ ವಶದಲ್ಲಿದ್ದ ಸೌಮ್ಯ ಶೆಟ್ಟಿ, ಜಾಮೀನಿಗಾಗಿ ಉಡುಪಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ನ್ಯಾಯಾಲಯವು, ಆರೋಪದ ಗಂಭೀರತೆಯನ್ನು ಪರಿಗಣಿಸಿ ಜಾಮೀನು ನೀಡಲು ನಿರಾಕರಿಸಿದೆ. ತನಿಖಾಧಿಕಾರಿ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಅವರು ಜಾಮೀನು ವಿರೋಧಿಸಿ ವಾದಿಸಿದ್ದರು.

