ಕಾಸರಗೋಡು : ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಸೀತಾಂಗೋಳಿ ಪೇಟೆ ಬಳಿಯ ನಿರ್ಜನ ಪ್ರದೇಶವೊಂದರಲ್ಲಿ ಮಂಗಳವಾರ ಮಧ್ಯಾಹ್ನ ಯುವಕನ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಇದು ನಿಗೂಢ ಸಾವಿನಂತೆ ಕಂಡರೂ, ಪೊಲೀಸರ ಚುರುಕಿನ ತನಿಖೆಯಿಂದ ಇದೊಂದು ವ್ಯವಸ್ಥಿತ ಹತ್ಯೆ ಎಂಬುದು ಸಾಬೀತಾಗಿದೆ. ಈ ಸಂಬಂಧ ಕುಂಬಳೆ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆಯಾದ ಯುವಕ: ಮುಂಡಿತ್ತಡ್ಕ ಬಾಪಲಿಪೋನ ಪಾಡ್ಲಡ್ಕದ ನಿವಾಸಿ ಸಫಾಯಿದ್ (30) ಎಂದು ಗುರುತಿಸಲಾಗಿದೆ.
ಬಂಧಿತ ಹಂತಕ: ಕುಂಬಳೆ ಕೋಟೆಕ್ಕಾರಿನ ನಿವಾಸಿ ಶ್ರೀನಿವಾಸ (39) ಎಂಬಾತನನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಶ್ರೀನಿವಾಸ ಮತ್ತು ಸಫಾಯಿದ್ ನಡುವಿನ ಪೂರ್ವ ದ್ವೇಷವೇ ಈ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ನಿರ್ಜನ ಪ್ರದೇಶದಲ್ಲಿ ಸಫಾಯಿದ್ನನ್ನು ಅಡ್ಡಗಟ್ಟಿದ ಆರೋಪಿಯು ಮರದ ತುಂಡಿನಿಂದ ಆತನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಪೊಲೀಸರು ಕೃತ್ಯ ನಡೆದ ಸ್ಥಳದಿಂದ ಕೊಲೆಗೆ ಬಳಸಲಾಗಿದ್ದ ಮರದ ತುಂಡನ್ನು ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

