ನವದೆಹಲಿ, ಮೇ 11: ಪಶ್ಚಿಮ ಬಂಗಾಳದ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಅಂತರಕ್ಕಿಂತ, ಮತದಾರರ ಪಟ್ಟಿ ಪರಿಷ್ಕರಣೆ (SIR) ವೇಳೆ ಕೈಬಿಡಲಾದ ಮತಗಳ ಸಂಖ್ಯೆಯೇ ಹೆಚ್ಚಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ವಿಚಾರಣೆಯ ಸಂದರ್ಭದಲ್ಲಿ ಸಲ್ಲಿಕೆಯಾದ ವಾದಗಳನ್ನು ಆಲಿಸಿತು. ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಹಿರಿಯ ವಕೀಲ ಕಲ್ಯಾಣ್ ಬ್ಯಾನರ್ಜಿ ಅವರು, “ರಾಜ್ಯದ 31 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಅಂತರವು, ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಮತಗಳ ಸಂಖ್ಯೆಗಿಂತ ಕಡಿಮೆಯಿದೆ” ಎಂದು ಗಂಭೀರ ಆರೋಪ ಮಾಡಿದರು.
ಆದರೆ, ಭಾರತೀಯ ಚುನಾವಣಾ ಆಯೋಗವು ಈ ವಾದಗಳನ್ನು ವಿರೋಧಿಸಿದ್ದು, ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ‘ಚುನಾವಣಾ ಅರ್ಜಿ’ (Election Petition) ಸಲ್ಲಿಸುವುದೇ ಸೂಕ್ತ ಕಾನೂನು ಪರಿಹಾರವಾಗಿದೆ ಎಂದು ವಾದಿಸಿತು. ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಅಥವಾ ಕೈಬಿಡುವುದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಈಗಾಗಲೇ ಕಾನೂನು ಚೌಕಟ್ಟಿನಲ್ಲಿ ವ್ಯವಸ್ಥೆಗಳಿವೆ ಎಂದು ಆಯೋಗ ಸ್ಪಷ್ಟಪಡಿಸಿತು.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ, ಒಟ್ಟು 294 ಸ್ಥಾನಗಳ ಪೈಕಿ ಭಾರತೀಯ ಜನತಾ ಪಾರ್ಟಿ 207 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದ್ದರೆ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಕೇವಲ 80 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚುನಾವಣೆಯಲ್ಲಿ ರಾಜ್ಯವು ಶೇಕಡಾ 90ಕ್ಕೂ ಹೆಚ್ಚು ಮತದಾನ ದಾಖಲಿಸಿತ್ತು. ಪ್ರಸ್ತುತ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಇದನ್ನು ಓದಿ : PM Modi austerity appeal : ಮೋದಿಯ ಕಠಿಣ ಕ್ರಮಗಳ ಮನವಿ ಬಿಜೆಪಿ-ಕಾಂಗ್ರೆಸ್ ಸಮರಕ್ಕೆ ನಾಂದಿ ಹಾಡಿದೆ.

