Home LOCAL Mangaluru | ಆರಿಫ್ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿತು ಮಹತ್ವದ ಸುಳಿವು!: ತಿಂಗಳ ಹಿಂದೆಯೇ ಮರ್ಡರ್...

Mangaluru | ಆರಿಫ್ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿತು ಮಹತ್ವದ ಸುಳಿವು!: ತಿಂಗಳ ಹಿಂದೆಯೇ ಮರ್ಡರ್ ಸ್ಕೆಚ್ ಹಾಕಿದ್ದ ಕಿಲ್ಲರ್ಸ್; ಫೆಬ್ರವರಿಯಲ್ಲೇ ತಪ್ಪಿತ್ತು ಪ್ರಾಣಾಪಾಯ!

0
134

ಮಂಗಳೂರು: ನಗರದ ಕುಖ್ಯಾತ ರೌಡಿ ಶೀಟರ್ ‘ಟ್ಯಾಬ್ಲೆಟ್’ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಇಂದು (ಏಪ್ರಿಲ್ 14) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಅರ್ಷದ್, ಪುಚ್ಚೆ ನಿಸಾಕ್ ಮತ್ತು ಜುನೈದ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಆರಿಫ್ ಹತ್ಯೆ ಪ್ರಕರಣದಲ್ಲಿ ಈವರೆಗೆ ಬಂಧಿತರಾದವರ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ತನಿಖೆಯ ವೇಳೆ ಪೊಲೀಸರಿಗೆ ಹತ್ಯೆಯ ಹಿಂದಿನ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ. ಕಳೆದ ಮಾರ್ಚ್ 27 ರಂದು ತೊಕ್ಕೊಟ್ಟಿನಲ್ಲಿ ಆರಿಫ್ ಚಲಾಯಿಸುತ್ತಿದ್ದ  ಬುಲೆಟ್  ಗೆ ಕಾರು ಡಿಕ್ಕಿ ಹೊಡೆಸಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಆದರೆ, ಈ ಹತ್ಯೆಗೆ ಬಹಳ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಫೆಬ್ರವರಿ 13 ರಂದೇ ಆರಿಫ್ ಮಂಗಳೂರಿಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳ ತಂಡವು ಆತನನ್ನು ಹಿಂಬಾಲಿಸಿ ಹತ್ಯೆಗೆ ಪ್ರಯತ್ನಿಸಿತ್ತು. ಅಂದು ಸಂಚು ವಿಫಲವಾಗಿತ್ತಾದರೂ, ಈಗ ಅಂದಿನ ಹತ್ಯಾ ಯತ್ನದಲ್ಲಿ ಪಾಲ್ಗೊಂಡಿದ್ದವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಗಳ ಪಾತ್ರದ ಕುರಿತು ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಬಂಧಿತ ಅರ್ಷದ್ ಹಂತಕರಿಗೆ ಶಸ್ತ್ರಾಸ್ತ್ರ ಪೂರೈಕೆ, ಪೊಲೀಸರ ಸಂಚಾರದ ಮಾಹಿತಿ ಮತ್ತು ಹಣದ ವ್ಯವಸ್ಥೆ ಮಾಡಿಕೊಡುತ್ತಿದ್ದ ಎಂದು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ಪುಚ್ಚೆ ನಿಸಾಕ್, ಈ ಹಿಂದಿನ ಕೊಲೆ ಯತ್ನದ ತಂಡದಲ್ಲಿ ನೇರವಾಗಿ ಭಾಗಿಯಾಗಿದ್ದಲ್ಲದೆ, 2022ರಲ್ಲಿ ನಡೆದಿದ್ದ ದಾಳಿಯಲ್ಲೂ ಶಾಮೀಲಾಗಿದ್ದ ಎನ್ನಲಾಗಿದೆ. ಇನ್ನು ಜುನೈದ್, ಹಂತಕರಿಗೆ ವಾಹನದ ವ್ಯವಸ್ಥೆ ಮಾಡುವ ಜೊತೆಗೆ ಹತ್ಯೆಯ ಪ್ಲಾನ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭೂಗತವಾಗಿದ್ದು, ಅವರ ಪತ್ತೆಗಾಗಿ ಸಿಸಿಬಿ ಪೊಲೀಸರ ತಂಡಗಳು ಜಾಲ ಬೀಸಿವೆ. “ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಕಾನೂನಿನ ಮುಂದೆ ತರಲಾಗುವುದು, ಯಾರಿಗೂ ವಿನಾಯಿತಿ ಇಲ್ಲ” ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ. ಸದ್ಯ ಈ ಸರಣಿ ಬಂಧನಗಳಿಂದಾಗಿ ಮಂಗಳೂರಿನ ಭೂಗತ ಲೋಕದಲ್ಲಿ ನಡುಕ ಶುರುವಾಗಿದೆ.

LEAVE A REPLY

Please enter your comment!
Please enter your name here

error: Content is protected !!