Home ತಾಜಾ ಸುದ್ದಿ Vinesh Chandel : ಐ-ಪಿಎಸಿ ನಿರ್ದೇಶಕ ಚಾಂಡೆಲ್‌ಗೆ 10 ದಿನಗಳ ಇಡಿ ಕಸ್ಟಡಿ

    Vinesh Chandel : ಐ-ಪಿಎಸಿ ನಿರ್ದೇಶಕ ಚಾಂಡೆಲ್‌ಗೆ 10 ದಿನಗಳ ಇಡಿ ಕಸ್ಟಡಿ

    0
    60
    Vinesh Chandel: I-PAC director Chandel remanded in 10-day ED custody

    ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಪ್ರಸಿದ್ಧ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ (I-PAC) ಗೆ ಜಾರಿ ನಿರ್ದೇಶನಾಲಯ (ED) ಭಾರಿ ಆಘಾತ ನೀಡಿದೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಐ-ಪ್ಯಾಕ್ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ವಿನೇಶ್ ಚಾಂದೇಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

     

    10 ದಿನಗಳ ಕಸ್ಟಡಿ: ಸೋಮವಾರ ತಡರಾತ್ರಿ ವಿನೇಶ್ ಅವರನ್ನು ಬಂಧಿಸಿದ ಇಡಿ, ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯನ್ನು 10 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿದೆ. ಪಶ್ಚಿಮ ಬಂಗಾಳದ ಅಸನ್ಸೋಲ್ ಭಾಗದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಮೊತ್ತದ ಕಲ್ಲಿದ್ದಲು ಅಕ್ರಮ ಸಾಗಾಟದ ಹಣವು ಹವಾಲಾ ಮಾರ್ಗದ ಮೂಲಕ ಐ-ಪ್ಯಾಕ್ ಸಂಸ್ಥೆಗೆ ತಲುಪಿದೆ ಎಂಬುದು ತನಿಖಾ ಸಂಸ್ಥೆಯ ಗಂಭೀರ ಆರೋಪವಾಗಿದೆ.

    ರಾಜಕೀಯ ಸಂಚಲನ: ಈ ಬಂಧನವು ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. “ಚುನಾವಣೆಗೆ ಹತ್ತು ದಿನಗಳ ಮುನ್ನ ಇಂತಹ ಕ್ರಮ ಕೈಗೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ. ಇದು ಚುನಾವಣಾ ಪ್ರಕ್ರಿಯೆಯ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆ ಎತ್ತುತ್ತದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಐ-ಪ್ಯಾಕ್ ಸಂಸ್ಥೆಯು 2021 ರಿಂದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಚುನಾವಣಾ ರಣತಂತ್ರ ರೂಪಿಸಿಕೊಡುತ್ತಿದೆ. ಇದೀಗ ಚುನಾವಣೆಯ ಹೊತ್ತಲ್ಲೇ ನಿರ್ದೇಶಕನ ಬಂಧನವಾಗಿರುವುದು ಪಕ್ಷದ ಕಾರ್ಯತಂತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐ-ಪ್ಯಾಕ್ ಕಚೇರಿಗಳ ಮೇಲೆ ದಾಳಿ ನಡೆದಾಗ ಸಿಎಂ ಮಮತಾ ಬ್ಯಾನರ್ಜಿ ಅವರು ನೇರವಾಗಿ ಸ್ಥಳಕ್ಕೆ ಆಗಮಿಸಿ ಇಡಿ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದು ದೊಡ್ಡ ಸುದ್ದಿಯಾಗಿತ್ತು.

    LEAVE A REPLY

    Please enter your comment!
    Please enter your name here

    error: Content is protected !!