ಮಂಗಳೂರು, ಆಗಸ್ಟ್ 18 : ಕುಂದಾಪುರ ಮೂಲದ ನಾರಾಯಣ (31) ಅವರು ಜೀವನೋಪಾಯಕ್ಕಾಗಿ ಮೀನುಗಾರಿಕೆ ವೃತ್ತಿಯನ್ನು ನೆಚ್ಚಿಕೊಂಡಿದ್ದು, ಉಳ್ಳಾಲ ಮೂಲದ ‘ಓಷಿಯನ್ ಸ್ಟಾರ್’ ಹೆಸರಿನ ಬೋಟ್‌ನಲ್ಲಿ ಇತ್ತೀಚೆಗಷ್ಟೇ ಹೊಸದಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಆಗಸ್ಟ್ 9ರಂದು ಮಂಗಳೂರಿನ ಧಕ್ಕೆಯಿಂದ ಇತರೆ ಮೀನುಗಾರರೊಂದಿಗೆ ಓಷಿಯನ್ ಸ್ಟಾರ್ ಬೋಟ್‌ನಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಬೃಹತ್ ಗಾತ್ರದ ಸಮುದ್ರದ ಅಲೆಗಳು ಬೋಟ್‌ಗೆ ಅಪ್ಪಳಿಸಿದ ಪರಿಣಾಮ ನಾರಾಯಣ ಅವರು ಆಯತಪ್ಪಿ ಸಮುದ್ರದ ಪಾಲಾಗಿ ನಾಪತ್ತೆಯಾಗಿದ್ದರು. ಈ ಸಂಬಂಧ ಅವರ ಕುಟುಂಬಸ್ಥರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಸತತ ಶೋಧ ಕಾರ್ಯದ ನಡುವೆಯೂ ಅವರ ಸುಳಿವು ಸಿಕ್ಕಿರಲಿಲ್ಲ. ಆದರೆ ಸೋಮವಾರ ಉಳ್ಳಾಲದ ಕೋಟೆಪುರ ಅಳಿವೆಬಾಗಿಲು ಸಮೀಪ ಅನಾಮಧೇಯ ಶವವೊಂದು ತೇಲುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ನಾರಾಯಣ ಅವರ ಸಹೋದರರು ಮೃತದೇಹವನ್ನು ಪರಿಶೀಲಿಸಿ ಅದು ನಾರಾಯಣ ಅವರದ್ದೇ ಎಂದು ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಶವಮಹಜರು ಪ್ರಕ್ರಿಯೆ ನಡೆಸಲಾಗಿದೆ. ಈ ದುರಂತ ಸಾವಿಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.