ಮುಂಬೈ : ಮುಂಬೈನ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದ ವೇಳೆ ಕ್ಯಾಮೆರಾ ಕಣ್ಣುಗಳೊಂದಿಗೆ ಮುಗಿಬಿದ್ದ ಪಾಪರಾಝಿಗಳ (Paparazzi) ವರ್ತನೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋಗಳಲ್ಲಿ, ಆಸ್ಪತ್ರೆಯಿಂದ ಹೊರಬರುತ್ತಿದ್ದ ಸಲ್ಮಾನ್ ಖಾನ್ ಅವರನ್ನು ಛಾಯಾಗ್ರಾಹಕರ (Photographers) ದೊಡ್ಡ ಗುಂಪೊಂದು ಸುತ್ತುವರಿದು ಜೋರಾಗಿ ಅವರ ಹೆಸರನ್ನು ಕೂಗುತ್ತಿರುವುದು ಕಂಡುಬಂದಿದೆ. ಆಸ್ಪತ್ರೆಯ ಆವರಣ ಎಂದೂ ನೋಡದೆ ಪಾಪರಾಝಿಗಳು ನಡೆದುಕೊಂಡ ರೀತಿಗೆ ತೀವ್ರ ಅಸಮಾಧಾನಗೊಂಡ ನಟ ಸಲ್ಮಾನ್ ಖಾನ್, ಕೈ ಸನ್ನೆಗಳ ಮೂಲಕವೇ ತಮ್ಮ ತೀವ್ರ ಬೇಸರವನ್ನು ಹೊರಹಾಕಿದ್ದಾರೆ. ಅಲ್ಲದೆ ಸ್ಥಳದಲ್ಲೇ ಛಾಯಾಗ್ರಾಹಕರ ಬೇಜವಾಬ್ದಾರಿ ವರ್ತನೆಯನ್ನು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಈ ಘಟನೆಯ ಬೆನ್ನಲ್ಲೇ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಲ್ಲು ಭಾಯ್, ಪತ್ರಿಕಾ ವಲಯದವರೊಂದಿಗೆ ತಾವು ಸದಾ ಸಹಕಾರದಿಂದ ನಡೆದುಕೊಂಡಿರುವುದನ್ನು ನೆನಪಿಸಿದ್ದಾರೆ. “ಆಸ್ಪತ್ರೆಯಲ್ಲಿದ್ದ ನನ್ನ ನೋವನ್ನು ಕೆಲವರು ಆನಂದಿಸುತ್ತಿರುವಂತೆ ಕಂಡಿತು. ನಾನು ಯಾವಾಗಲೂ ಮಾಧ್ಯಮದವರೊಂದಿಗೆ ಸಂವಹನ ನಡೆಸಿ, ಕಾಳಜಿ ವಹಿಸಿ, ಅವರ ಜೀವನೋಪಾಯಕ್ಕೂ ಬೆಂಬಲ ನೀಡಲು ಪ್ರಯತ್ನಿಸಿದ್ದೇನೆ” ಎಂದು ಬೇಸರದಿಂದ ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಇನ್‌ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿರುವ ಸಲ್ಮಾನ್ ಖಾನ್, “60 ಸಾಲ್ ಕಾ ಹೋ ಗಯಾ ಹೂಂ, ಲೇಕಿನ್ ಲಡ್ನಾ ನಹೀಂ ಭೂಲಾ” (ನನಗೆ 60 ವರ್ಷ ವಯಸ್ಸಾಗಿರಬಹುದು, ಆದರೆ ಹೋರಾಡುವುದನ್ನು ನಾನು ಇನ್ನು ಮರೆತಿಲ್ಲ!) ಎಂದು ಬರೆದು ತಮಗೆ ತೊಂದರೆ ಕೊಟ್ಟವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಸಲ್ಮಾನ್ ಖಾನ್ ಅವರ ಖಾಸಗಿತನವನ್ನು ಗೌರವಿಸಬೇಕು ಎಂದರೆ, ಇನ್ನು ಕೆಲವರು ಸಾರ್ವಜನಿಕ ವ್ಯಕ್ತಿಗಳ ಜೀವನದಲ್ಲಿ ಮಾಧ್ಯಮಗಳ ಗಮನ ಸೆಳೆಯುವುದು ಸಹಜ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ : Mamata Banerjee : ದೆಹಲಿ ಗದ್ದುಗೆಯಿಂದ ಬಿಜೆಪಿಯನ್ನು ಕಿತ್ತೆಸೆಯುತ್ತೇವೆ ; ಟಿಎಂಸಿ ಶಾಸಕರ ಸಭೆಯಲ್ಲಿ ಮಮತಾ ಬ್ಯಾನರ್ಜಿ ವಾಗ್ದಾಳಿ!



