ಚೆನ್ನೈ: ಚೆನ್ನೈನಲ್ಲಿ ರಾಜಕೀಯ ವಾತಾವರಣ ಬಿಸಿಯೇರಿದ್ದು, ಟಿವಿಕೆ ಪಕ್ಷವು ತಮಿಳುನಾಡಿನ ಚುನಾವಣಾ ಫಲಿತಾಂಶದ ಟ್ರೆಂಡ್‌ನಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಸದ್ಯದ ಮಾಹಿತಿಯ ಪ್ರಕಾರ, ಟಿವಿಕೆ ಬರೋಬ್ಬರಿ 103 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಬಹುಮತದತ್ತ ದಾಪುಗಾಲು ಹಾಕಿದೆ. ಇದು ಆಡಳಿತರೂಢ ಡಿಎಂಕೆಗೆ ತೀವ್ರ ಹಿನ್ನಡೆಯನ್ನು ಉಂಟುಮಾಡಿದ್ದು, ವಿರೋಧ ಪಕ್ಷಗಳಲ್ಲಿ ಆತಂಕ ಮೂಡಿಸಿದೆ.
ಈ ಅಭೂತಪೂರ್ವ ಮುನ್ನಡೆಯ ಬಗ್ಗೆ ಪ್ರತಿಕ್ರಿಯಿಸಿದ ಟಿವಿಕೆ ವಕ್ತಾರ ಫೆಲಿಕ್ಸ್ ಜೆರಾಲ್ಡ್, “ತಮಿಳುನಾಡಿನಲ್ಲಿ ಟಿವಿಕೆ ತನ್ನ ಸ್ವಂತ ಬಲದಿಂದ ಸರ್ಕಾರವನ್ನು ರಚಿಸಲಿದೆ ಎಂಬ ವಿಶ್ವಾಸ ನಮಗಿದೆ. ಡಿಎಂಕೆಗೆ ಈಗ ಪರಿಸ್ಥಿತಿಯ ಅರಿವಾಗಿದೆ,” ಎಂದು ಹೇಳಿದ್ದಾರೆ. ವಿಜಯ್ ಅವರ ಜನಪ್ರಿಯತೆ ಮತ್ತು ಪಕ್ಷದ ಸಿದ್ಧಾಂತವು ಮತದಾರರನ್ನು ತಲುಪಿರುವುದಕ್ಕೆ ಈ ಗೆಲುವು ಸಾಕ್ಷಿಯಾಗಿದೆ.
ದಶಕಗಳಿಂದ ತಮಿಳುನಾಡು ರಾಜಕೀಯದಲ್ಲಿ ಅಧಿಪತ್ಯ ಸಾಧಿಸಿದ್ದ ಹಳೆಯ ಪಕ್ಷಗಳಿಗೆ, ವಿಜಯ್ ಅವರ ಈ ರಾಜಕೀಯ ಎಂಟ್ರಿ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಟಿವಿಕೆ ಅಭ್ಯರ್ಥಿಗಳ ಈ ಅಬ್ಬರ, ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಬದಲಾವಣೆಯ ಮುನ್ಸೂಚನೆಯಾಗಿದೆ.

