Tuesday, May 12, 2026
Homeತಾಜಾ ಸುದ್ದಿThalapathy Vijay CM orders : ವಿಜಯ್ ಸರ್ಕಾರ ಮದ್ಯದಂಗಡಿಗಳ ಮೇಲೆ ಕಠಿಣ ಕ್ರಮ; ದೇವಾಲಯಗಳು,...

Thalapathy Vijay CM orders : ವಿಜಯ್ ಸರ್ಕಾರ ಮದ್ಯದಂಗಡಿಗಳ ಮೇಲೆ ಕಠಿಣ ಕ್ರಮ; ದೇವಾಲಯಗಳು, ಶಾಲೆಗಳ ಬಳಿ ಇರುವ 717 ಟಾಸ್ಮ್ಯಾಕ್ ಅಂಗಡಿಗಳು ಮುಚ್ಚಲಿವೆ

ಚೆನ್ನೈ, ಮೇ 12 : ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನಟ-ರಾಜಕಾರಣಿ ಜೋಸೆಫ್ ವಿಜಯ್ ಅವರು ರಾಜ್ಯದಾದ್ಯಂತ ಮದ್ಯದ ಮಳಿಗೆಗಳನ್ನು ಬಂದ್ ಮಾಡುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದಾರೆ.

ತಮಿಳುನಾಡು  ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮಂಗಳವಾರ ಒಂದು ಪ್ರಮುಖ ಆದೇಶ ಹೊರಡಿಸಿದ್ದು, ರಾಜ್ಯದಾದ್ಯಂತ ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ ಸಮೀಪವಿರುವ 717 ಸರ್ಕಾರಿ ಸ್ವಾಮ್ಯದ ‘ಟಾಸ್ಮ್ಯಾಕ್’ (Tasmac) ಮದ್ಯದ ಮಳಿಗೆಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ. ಧಾರ್ಮಿಕ ಸ್ಥಳಗಳು, ಶಾಲೆ, ಕಾಲೇಜು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮುಂದಿನ ಎರಡು ವಾರಗಳಲ್ಲಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಅಧಿಕೃತ ಮಾಹಿತಿಯ ಪ್ರಕಾರ, ತಮಿಳುನಾಡಿನಲ್ಲಿ ಪ್ರಸ್ತುತ 4,765 ಟಾಸ್ಮ್ಯಾಕ್ ಮದ್ಯದ ಮಳಿಗೆಗಳಿದ್ದು, ಈ ಪೈಕಿ 717 ಅಂಗಡಿಗಳನ್ನು ಮುಚ್ಚಲು ಗುರುತಿಸಲಾಗಿದೆ. ಇದರಲ್ಲಿ 276 ಮಳಿಗೆಗಳು ಧಾರ್ಮಿಕ ಸ್ಥಳಗಳ ಬಳಿ, 186 ಶಿಕ್ಷಣ ಸಂಸ್ಥೆಗಳ ಹತ್ತಿರ ಮತ್ತು 255 ಮಳಿಗೆಗಳು ಬಸ್ ನಿಲ್ದಾಣಗಳ ಸಮೀಪ ಕಾರ್ಯಾಚರಿಸುತ್ತಿದ್ದವು. ಈ ನಿರ್ಧಾರವು ಹೊಸದಾಗಿ ಅಧಿಕಾರಕ್ಕೆ ಬಂದ ವಿಜಯ್ ನೇತೃತ್ವದ ಸರ್ಕಾರದ ಮೊದಲ ಪ್ರಮುಖ ನೀತಿಯಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯದ ಲಭ್ಯತೆಯನ್ನು ನಿರ್ಬಂಧಿಸುವ ಮೂಲಕ ಸಾಮಾಜಿಕ ಕಲ್ಯಾಣಕ್ಕೆ ಆದ್ಯತೆ ನೀಡಲಾಗಿದೆ.

ನಟ-ರಾಜಕಾರಣಿ 51 ವರ್ಷದ ವಿಜಯ್ ಅವರು, ತಮ್ಮ ಪಕ್ಷವಾದ ‘ತಮಿಳಗ ವೆಟ್ರಿ ಕಳಗಂ’ (TVK) ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಭಾನುವಾರ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ (VCK) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಬೆಂಬಲದೊಂದಿಗೆ ಟಿಬಿಕೆ ರಾಜ್ಯದ ಮೊದಲ ಸಮ್ಮಿಶ್ರ ಸರ್ಕಾರವನ್ನು ರಚಿಸಿದೆ.

ಮದ್ಯದ ಅಂಗಡಿಗಳ ಬಂದ್ ಆದೇಶದ ಜೊತೆಗೆ, ಮುಖ್ಯಮಂತ್ರಿ ವಿಜಯ್ ಅವರು ಹಲವು ಜನಪರ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ. ಗೃಹ ಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್ ಜಾರಿ, ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಪಡೆಯ ರಚನೆ ಮತ್ತು ಪ್ರತಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ವಿರೋಧಿ ಘಟಕಗಳ ಸ್ಥಾಪನೆಗೆ ಚಾಲನೆ ನೀಡಿದ್ದಾರೆ. ತಮ್ಮ ಮೊದಲ ಭಾಷಣದಲ್ಲಿ ಹಿಂದಿನ ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ರಾಜ್ಯವು 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲದ ಸುಳಿಗೆ ಸಿಲುಕಿದ್ದು, ಶೀಘ್ರದಲ್ಲೇ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ‘ಶ್ವೇತಪತ್ರ’ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಕ್ಕೆ ರಾಜಿನಾಮೆ ನೀಡಿದ ನಂತರ ವಿಜಯ್ ನೇತೃತ್ವದ ಟಿಬಿಕೆ ಪ್ರಸ್ತುತ ಅಸೆಂಬ್ಲಿಯಲ್ಲಿ 107 ಸ್ಥಾನಗಳನ್ನು ಹೊಂದಿದೆ. ಮಿತ್ರಪಕ್ಷಗಳ 13 ಶಾಸಕರ ಬೆಂಬಲದೊಂದಿಗೆ, ಸರ್ಕಾರವು ಮುಂಬರುವ ವಿಶ್ವಾಸಮತ ಪರೀಕ್ಷೆಯಲ್ಲಿ ಸುಲಭವಾಗಿ ಬಹುಮತ ಸಾಬೀತುಪಡಿಸುವ ನಿರೀಕ್ಷೆಯಿದೆ.

ಇದನ್ನು ಓದಿ : Mangaluru : “ಹಣ ಮತ್ತು ಗಿಫ್ಟ್‌ಗಾಗಿ ಇನ್‌ಸ್ಟಾಗ್ರಾಮ್ ಪ್ರದರ್ಶನ ಬೇಕೇ?” ಬುರ್ಖಾಧಾರಿ ಯುವತಿಯರನ್ನೇ ಟಾರ್ಗೆಟ್ ಮಾಡ್ತಿರೋ ಇನ್‌ಫ್ಲುಯೆನ್ಸರ್ಸ್‌ಗಳ ವಿರುದ್ಧ ಜನಾಕ್ರೋಶ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!