ಪೂರ್ವ ಪೆಸಿಫಿಕ್ ಸಾಗರ : ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಅಮೆರಿಕದ ಸೇನೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪೆಸಿಫಿಕ್ ಸಾಗರದ ಪೂರ್ವ ಭಾಗದಲ್ಲಿ ಸಂಚರಿಸುತ್ತಿದ್ದ ಅನುಮಾನಾಸ್ಪದ ಬೋಟ್ ಒಂದರ ಮೇಲೆ ಅಮೆರಿಕದ ಸದರ್ನ್ ಕಮಾಂಡ್ (SOUTHCOM) ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಅಮೆರಿಕ ಸೇನೆಯ ಪ್ರಕಾರ, ಈ ಬೋಟ್ ಲ್ಯಾಟಿನ್ ಅಮೆರಿಕದ ಡ್ರಗ್ ಕಾರ್ಟೆಲ್‌ಗಳಿಗೆ ಸಂಬಂಧಿಸಿದ್ದಾಗಿತ್ತು ಮತ್ತು ಮಾದಕವಸ್ತು ಕಳ್ಳಸಾಗಣೆ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಜನರಲ್ ಫ್ರಾನ್ಸಿಸ್ ಎಲ್. ಡೊನೊವನ್ ಅವರ ಆದೇಶದ ಮೇರೆಗೆ ಈ ‘ಲೆಥಲ್ ಕೈನೆಟಿಕ್ ಸ್ಟ್ರೈಕ್’ (ಮಾರಣಾಂತಿಕ ದಾಳಿ) ನಡೆಸಲಾಗಿದೆ. ಸೇನೆಯು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಆಕಾಶದಿಂದ ನಡೆದ ದಾಳಿಗೆ ಬೋಟ್ ಹೊತ್ತಿ ಉರಿಯುತ್ತಿರುವ ದೃಶ್ಯಗಳಿವೆ.
ಕಳೆದ ಸೆಪ್ಟೆಂಬರ್‌ನಿಂದ ಅಮೆರಿಕವು ಪೆಸಿಫಿಕ್ ಮತ್ತು ಕೆರಿಬಿಯನ್ ಸಮುದ್ರದಲ್ಲಿ ಇಂತಹ ಹತ್ತಾರು ದಾಳಿಗಳನ್ನು ನಡೆಸಿದ್ದು, ಈವರೆಗೆ ಕನಿಷ್ಠ 170 ಜನರು ಬಲಿಯಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತವು ಇದನ್ನು ಮಾದಕವಸ್ತು ದಂಧೆಯ ವಿರುದ್ಧದ ಯುದ್ಧ ಎಂದು ಕರೆಯುತ್ತಿದೆ. ಆದರೆ, ಇತ್ತೀಚಿನ ಈ ದಾಳಿಗಳಲ್ಲಿ ಮೃತಪಟ್ಟವರು ನಿಜಕ್ಕೂ ಕಳ್ಳಸಾಗಣೆದಾರರೇ ಅಥವಾ ಮೀನುಗಾರರೇ ಎಂಬ ಬಗ್ಗೆ ಅಮೆರಿಕ ಯಾವುದೇ ಪಕ್ಕಾ ಸಾಕ್ಷ್ಯಗಳನ್ನು ನೀಡಿಲ್ಲ.
ಅಂತರಾಷ್ಟ್ರೀಯ ಕಾನೂನು ತಜ್ಞರು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಈ ದಾಳಿಗಳನ್ನು ತೀವ್ರವಾಗಿ ಖಂಡಿಸಿವೆ. ಅಮೆರಿಕವು ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಯಾವುದೇ ವಿಚಾರಣೆ ನಡೆಸದೆ ‘Extrajudicial Killings’ (ನ್ಯಾಯಾಂಗ ಬಾಹಿರ ಹತ್ಯೆ) ಮಾಡುತ್ತಿದೆ ಮತ್ತು ನಾಗರಿಕರನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿವೆ. ಈ ಸಂಬಂಧ ಅಂತರ-ಅಮೆರಿಕನ್ ಮಾನವ ಹಕ್ಕುಗಳ ಆಯೋಗವು ಮೊದಲ ಬಾರಿಗೆ ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿದೆ.

