ಬಸ್ತಿ (ಉತ್ತರ ಪ್ರದೇಶ): ವೈದ್ಯಕೀಯ ಲೋಕವೇ ತಲೆತಗ್ಗಿಸುವಂತಹ ಮತ್ತು ಮಾನವಕುಲವೇ ಬೆಚ್ಚಿಬೀಳುವಂತಹ ಅತ್ಯಂತ ದಾರುಣ ಘಟನೆಯೊಂದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಆಂಬ್ಯುಲೆನ್ಸ್‌ನಲ್ಲಿ ಹೆರಿಗೆ ಮಾಡಿಸುವ ಅವಿವೇಕದ ಪ್ರಯತ್ನದಲ್ಲಿ ಏಳು ತಿಂಗಳ ಹಸುಗೂಸಿನ ದೇಹ ಮತ್ತು ತಲೆ ಬೇರ್ಪಟ್ಟಿದ್ದು, ಮಗುವಿನ ಕತ್ತರಿಸಿದ ತಲೆ ತಾಯಿಯ ಗರ್ಭದಲ್ಲೇ ಉಳಿದುಕೊಂಡ ಭೀಕರ ಘಟನೆ ವರದಿಯಾಗಿದೆ.
ನಡೆದಿದ್ದೇನು?: ಬಸ್ತಿ ಜಿಲ್ಲೆಯ ಏಳು ತಿಂಗಳ ಗರ್ಭಿಣಿ ಪ್ರೇಮಾ ದೇವಿಗೆ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಕುದ್ರಾಹಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿತ್ತು. ಆಸ್ಪತ್ರೆಗೆ ತಲುಪಲು ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ ಮಹಿಳೆಯ ನೋವು ತೀವ್ರಗೊಂಡಿದೆ. ಈ ವೇಳೆ ಆಂಬ್ಯುಲೆನ್ಸ್‌ನಲ್ಲಿದ್ದ ಆಶಾ ಕಾರ್ಯಕರ್ತೆ, ವೈದ್ಯರಿಗಾಗಿ ಕಾಯುವ ಬದಲು ತಾನೇ ಹೆರಿಗೆ ಮಾಡಿಸಲು ಮುಂದಾಗಿದ್ದಾಳೆ.
ಮಹಿಳೆಗೆ ನೋವು ನಿವಾರಕ ಇಂಜೆಕ್ಷನ್ ನೀಡಿ, ಬಲವಂತವಾಗಿ ಸಾಮಾನ್ಯ ಹೆರಿಗೆ ಮಾಡಲು ಪ್ರಯತ್ನಿಸಿದ್ದಾಳೆ. ಈ ಸಂದರ್ಭದಲ್ಲಿ ಮಗುವಿನ ದೇಹ ಹೊರಬರುತ್ತಿದ್ದಾಗ, ಆಶಾ ಕಾರ್ಯಕರ್ತೆ ಬಲವಾಗಿ ಎಳೆದ ಪರಿಣಾಮ ಮಗುವಿನ ಶರೀರ ಮತ್ತು ತಲೆ ಬೇರ್ಪಟ್ಟಿದೆ. ಮಗುವಿನ ಶರೀರ ಮಾತ್ರ ಆಕೆಯ ಕೈಗೆ ಬಂದಿದ್ದು, ತಲೆ ತಾಯಿಯ ಗರ್ಭದ ಒಳಗೇ ಸಿಲುಕಿಕೊಂಡಿದೆ!
ಸತ್ಯ ಮರೆಮಾಚುವ ಯತ್ನ: ತಮ್ಮ ತಪ್ಪಿನಿಂದ ಮಗು ಸಾವನ್ನಪ್ಪಿದ್ದನ್ನು ಕಂಡು ಭಯಭೀತರಾದ ಆಶಾ ಕಾರ್ಯಕರ್ತೆ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ, ಸತ್ಯವನ್ನು ಮರೆಮಾಚಿ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿಂದ ಅವರನ್ನು ಜಿಲ್ಲಾ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು. ಜಿಲ್ಲಾಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಮಾಡಿದ ವೈದ್ಯರು, ತಾಯಿಯ ಗರ್ಭದೊಳಗೆ ಮಗುವಿನ ಕತ್ತರಿಸಿದ ತಲೆ ಇರುವುದನ್ನು ಕಂಡು ದಂಗಾಗಿದ್ದಾರೆ. ತಕ್ಷಣವೇ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ತಲೆಯನ್ನು ಹೊರತೆಗೆದಿದ್ದಾರೆ. ಅದೃಷ್ಟವಶಾತ್ ತಾಯಿ ಪ್ರೇಮಾ ದೇವಿ ಪ್ರಸ್ತುತ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಇಷ್ಟು ದೊಡ್ಡ ಅನಾಹುತ ನಡೆದರೂ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ವೈದ್ಯಕೀಯ ಲೋಕದ ಭಾರಿ ಲೋಪದೋಷಗಳನ್ನು ಎತ್ತಿ ತೋರಿಸಿದ್ದು, ಸೂಕ್ತ ತನಿಖೆಗೆ ಆಗ್ರಹ ಕೇಳಿಬಂದಿದೆ.

