ಬೆಂಗಳೂರು, ಆ,27: ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಗ್ರಾಹಕರು ಅಂಗಡಿಗಳಲ್ಲಿ ಖರೀದಿಸುವ ಲೂಸ್ ಎಣ್ಣೆಯ ಮೂಲ, ತಯಾರಿಕಾ ದಿನಾಂಕ ಹಾಗೂ ಲೇಬಲಿಂಗ್ ಇಲ್ಲದೆ ಮಾರಾಟವಾಗುತ್ತಿರುವುದರ ಮೇಲೆ ಆಹಾರ ಸುರಕ್ಷತಾ ಇಲಾಖೆ ತೀವ್ರ ನಿಗಾ ವಹಿಸಿದೆ. ಸೂಕ್ತ FSSAI ಪರವಾನಗಿ ಇಲ್ಲದೆ ನಿಯಮ ಉಲ್ಲಂಘಿಸಿ ಎಣ್ಣೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಅಡುಗೆ ಎಣ್ಣೆಯಲ್ಲಿ ಅಗ್ಗದ ಅಥವಾ ಹಾನಿಕಾರಕ ರಾಸಾಯನಿಕ ಪದಾರ್ಥಗಳನ್ನು ಕಲಬೆರಕೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗುತ್ತಿದ್ದು, ಪರೀಕ್ಷೆಯಲ್ಲಿ ವಿಫಲವಾದರೆ ಮಾರಾಟ ತಡೆದು ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.
ತೆರೆದ ಪಾತ್ರೆಗಳಲ್ಲಿ ಅಥವಾ ಕ್ಯಾನ್ಗಳಲ್ಲಿ ಮಾರಾಟವಾಗುವ ಎಣ್ಣೆಗೆ ಅಗ್ಗದ ಮಿನರಲ್ ಆಯಿಲ್ ಅಥವಾ ಹಾನಿಕಾರಕ ಕೆಮಿಕಲ್ ಬೆರೆಸುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದೇ ಪ್ಯಾಕಿಂಗ್ ದಿನಾಂಕ, ಎಕ್ಸ್ಪೈರಿ ಡೇಟ್ ಇಲ್ಲದ ಇಂತಹ ಕಲಬೆರಕೆ ಎಣ್ಣೆ ಬಳಕೆಯಿಂದ ಹೃದಯಾಘಾತ, ಜೀರ್ಣಾಂಗವ್ಯೂಹದ ಸಮಸ್ಯೆ ಹಾಗೂ ಕ್ಯಾನ್ಸರ್ನಂತಹ ಮಾರಕ ರೋಗಗಳು ಬರುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಲೂಸ್ ಎಣ್ಣೆ ಮಾರಾಟದ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚನೆಗೆ ಸೂಚಿಸಲಾಗಿದ್ದು, ಸಮಿತಿ ನೀಡುವ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟವನ್ನು ಸಂಪೂರ್ಣ ಬ್ಯಾನ್ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಗ್ರಾಹಕರು ಕೇವಲ FSSAI ನೋಂದಾಯಿತ ಹಾಗೂ ಸೀಲ್ ಮಾಡಿದ ಪ್ಯಾಕೆಟ್ ಎಣ್ಣೆಯನ್ನೇ ಬಳಸುವಂತೆ ಎಚ್ಚರಿಕೆ ನೀಡಲಾಗಿದೆ.
ಇದನ್ನು ಓದಿ : Mangalore | ವಿದ್ಯಾರ್ಥಿಗಳಿಂದ ಅಕ್ರಮ ಫೀಸ್ ವಸೂಲಿ: ಮಂಗಳೂರು ವಿವಿ ಅಲ್ಯೂಮ್ನಿ ಸಂಘದ ಬ್ಯಾಂಕ್ ಖಾತೆಗಳ ತನಿಖೆಗೆ ಆಗ್ರಹ!