Tuesday, May 12, 2026
Homeತಾಜಾ ಸುದ್ದಿSalim Dola : ಸಲೀಂ ಡೋಲಾ ಯಾರು? ಮಾದಕ ದ್ರವ್ಯ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಸಹಾಯಕನನ್ನು...

Salim Dola : ಸಲೀಂ ಡೋಲಾ ಯಾರು? ಮಾದಕ ದ್ರವ್ಯ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಸಹಾಯಕನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ.

ನವದೆಹಲಿ : ಮಾದಕ ದ್ರವ್ಯ ಜಾಲದ ಪ್ರಮುಖ ಆರೋಪಿ ಸಲೀಂ ಡೋಲಾನನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿದೆ. ಟರ್ಕಿಯ ರಾಷ್ಟ್ರೀಯ ಗುಪ್ತಚರ ಸಂಸ್ಥೆ ಮತ್ತು ಸ್ಥಳೀಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈತ ಸೆರೆಸಿಕ್ಕಿದ್ದಾನೆ. ಪ್ರಸ್ತುತ ದೆಹಲಿಯ ಎನ್‌ಸಿಬಿ (NCB) ಕಚೇರಿಯಲ್ಲಿ ಬಿಗಿ ಭದ್ರತೆಯಲ್ಲಿ ಈತನನ್ನು ಇರಿಸಲಾಗಿದ್ದು, ಶೀಘ್ರದಲ್ಲೇ ಹೆಚ್ಚಿನ ತನಿಖೆಗಾಗಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು.

1966ರಲ್ಲಿ ಮುಂಬೈನ ಬೈಕುಲ್ಲಾದಲ್ಲಿ ಜನಿಸಿದ ಸಲೀಂ ಡೋಲಾ, ಸಣ್ಣ ವಯಸ್ಸಿನಲ್ಲೇ ಅಪರಾಧ ಲೋಕಕ್ಕೆ ಕಾಲಿಟ್ಟಿದ್ದ. ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್‌ನೊಂದಿಗೆ ಸ್ನೇಹ ಬೆಳೆಸಿದ ಈತ, ಆರಂಭದಲ್ಲಿ ಮುಂಬೈ ಮತ್ತು ದೆಹಲಿ ನಡುವೆ ಗುಟ್ಕಾ ಸ್ಮಗ್ಲಿಂಗ್ ಮಾಡುತ್ತಿದ್ದ. ಕಾಲಕ್ರಮೇಣ ಗಾಂಜಾ ಮಾರಾಟದ ಮೂಲಕ ಡ್ರಗ್ ಮಾಫಿಯಾದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದ.

ಜೈಲಿನಿಂದ ಬಿಡುಗಡೆಯಾದ ನಂತರ ಕೈಲಾಶ್ ರಜಪೂತ್ ಎಂಬಾತನ ಜೊತೆಗೂಡಿದ ಡೋಲಾ, ಸಿಂಥೆಟಿಕ್ ಡ್ರಗ್ಸ್ ತಯಾರಿಕೆಯಲ್ಲಿ ತೊಡಗಿದ್ದ. ‘ಬಟನ್’ ಎಂದು ಕರೆಯಲ್ಪಡುವ ಅಪಾಯಕಾರಿ ಫೆಂಟಾನಿಲ್ ಆಧಾರಿತ ಮಾದಕ ಮಾತ್ರೆಗಳನ್ನು ತಯಾರಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪೂರೈಸುತ್ತಿದ್ದ. 2018ರಲ್ಲಿ 100 ಕೆಜಿ ಫೆಂಟಾನಿಲ್ ಸೇರಿದಂತೆ ಹಲವು ಬಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರೂ, ತಾಂತ್ರಿಕ ಕಾರಣಗಳಿಂದ ಜಾಮೀನು ಪಡೆದು ವಿದೇಶಕ್ಕೆ ಪರಾರಿಯಾಗಿದ್ದ.

ಕಳೆದ ಒಂದು ದಶಕದಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಡೋಲಾ, ಯುಎಇ ಮತ್ತು ಟರ್ಕಿಯಿಂದಲೇ ತನ್ನ ಡ್ರಗ್ ಜಾಲವನ್ನು ನಿಯಂತ್ರಿಸುತ್ತಿದ್ದ. ಆದರೆ ಕಳೆದ ವರ್ಷ ಆತನ ಮಗ ತಾಹಿರ್ ಮತ್ತು ಸೋದರಳಿಯ ಮುಸ್ತಫಾನನ್ನು ಯುಎಇಯಿಂದ ಗಡಿಪಾರು ಮಾಡುವ ಮೂಲಕ ಆತನ ನೆಟ್‌ವರ್ಕ್ ಅನ್ನು ಭಾರತೀಯ ತನಿಖಾ ಸಂಸ್ಥೆಗಳು ದುರ್ಬಲಗೊಳಿಸಿದ್ದವು. ಈಗ ಖುದ್ದು ಡೋಲಾನೇ ಸಿಕ್ಕಿಬಿದ್ದಿರುವುದು ಮುಂಬೈ ಮತ್ತು ಸೂರತ್‌ನಲ್ಲಿ ನಡೆಯುತ್ತಿದ್ದ ಮಾದಕ ದ್ರವ್ಯ ಜಾಲದ ಅಸಲಿ ಮುಖಗಳನ್ನು ಬಯಲು ಮಾಡಲು ನೆರವಾಗಲಿದೆ.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!