ಮುಂಬೈ : ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ “ರಾಹುಲ್ ಗಾಂಧಿ ಅವರೊಂದಿಗೆ ವಿವಾಹ” ಕುರಿತ ವದಂತಿಗೆ ಸ್ವತಃ ಕಂಗನಾ ರನೌತ್ ಅವರೇ ತೆರೆ ಎಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ “ರಾಹುಲ್ ಗಾಂಧಿ ಒಂದು ವೇಳೆ ಬಿಜೆಪಿಗೆ ಸೇರ್ಪಡೆಗೊಂಡರೆ, ನಾನು ಅವರನ್ನು ಮದುವೆಯಾಗಲು ಸಿದ್ಧ” ಎಂದು ಕಂಗನಾ ಹೇಳಿದ್ದಾರೆ ಎಂಬ ಪೋಸ್ಟ್‌ಗಳು ವೈರಲ್ ಆಗಿದ್ದವು.
ಈ ಸಂಬಂಧ ಸೋಮವಾರ (ಮೇ 4) ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ಪಷ್ಟನೆ ನೀಡಿರುವ ಕಂಗನಾ, ಇಂತಹ ವರದಿಗಳನ್ನು “ಫೇಕ್ ನ್ಯೂಸ್” (ಸುಳ್ಳು ಸುದ್ದಿ) ಎಂದು ಕರೆದಿದ್ದಾರೆ. ರಾಜಕೀಯದಲ್ಲಿ ಮಹಿಳೆಯರನ್ನು ಗುರಿ ಮಾಡಿ ಇಂತಹ ಕೀಳುಮಟ್ಟದ ವದಂತಿಗಳನ್ನು ಹರಡುತ್ತಿರುವವರ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಸುಳ್ಳು ಸುದ್ದಿ ಎಷ್ಟು ದಯನೀಯವಾಗಿದೆಯೆಂದರೆ, ರಾಜಕೀಯದಲ್ಲೂ ಮಹಿಳೆಯರಿಗೆ ಕನಿಷ್ಠ ಗೌರವವಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರಿಗೆ ನಾಚಿಕೆಯಾಗಬೇಕು,” ಎಂದು ಅವರು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಮನರಂಜನಾ ಪುಟಗಳಲ್ಲಿ ಈ ಪೋಸ್ಟ್‌ಗಳು ಭಾರಿ ಚರ್ಚೆ ಮತ್ತು ಮೀಮ್‌ಗಳಿಗೆ ಕಾರಣವಾಗಿದ್ದವು. ವಾಸ್ತವದಲ್ಲಿ, ಕಂಗನಾ ರನೌತ್ ಮತ್ತು ರಾಹುಲ್ ಗಾಂಧಿ ನಡುವೆ ಯಾವುದೇ ಇಂತಹ ವೈಯಕ್ತಿಕ ಬಾಂಧವ್ಯದ ಹೇಳಿಕೆಗಳು ನೀಡಿಲ್ಲ. ಬದಲಾಗಿ, ಕಂಗನಾ ಅವರು ಹಲವು ಬಾರಿ ರಾಹುಲ್ ಗಾಂಧಿ ಅವರ ಲೋಕಸಭಾ ಭಾಷಣಗಳನ್ನು ಟೀಕಿಸಿದ್ದು, ಇತ್ತೀಚಿನ ಏಪ್ರಿಲ್ 2026 ರ ರ್ಯಾಲಿಯೊಂದರಲ್ಲಿ, ಅವರ ಭಾಷಣವು ತಮಗೆ “ತಲೆನೋವು” ತರುತ್ತದೆ ಎಂದು ಲೇವಡಿ ಮಾಡಿದ್ದರು.
ಪ್ರಸ್ತುತ ವೈರಲ್ ಆಗಿರುವ ಮದುವೆಗೆ ಸಂಬಂಧಿಸಿದ ಯಾವುದೇ ಅಧಿಕೃತ ಮೂಲ ಅಥವಾ ಸಂದರ್ಶನದ ಪುರಾವೆಗಳು ಲಭ್ಯವಿಲ್ಲ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂತಹ ಆಧಾರರಹಿತ ಪೋಸ್ಟ್‌ಗಳನ್ನು ನಂಬದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

