ಕಾರ್ಕಳ : ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಚಿತ್ರವನ್ನು ತಲೆ ಕತ್ತರಿಸಿದ ರೀತಿಯಲ್ಲಿ ಎಡಿಟ್ ಮಾಡಿ, ಪ್ರಚೋದನಕಾರಿ ಹಾಗೂ ಅವಾಚ್ಯ ಶಬ್ದಗಳ ಹಿನ್ನೆಲೆ ಧ್ವನಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಆರೋಪಿ ಪ್ರಸಾದ್ ಶೆಟ್ಟಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆಪ್ಟೆಂಬರ್ 12ರಂದು ರಾತ್ರಿ ಕಾರ್ಕಳದ ವಿಘ್ನೇಶ್ ಪ್ರಸಾದ್ ರಾವ್ ಎಂಬುವವರು ಫೇಸ್‌ಬುಕ್ ವೀಕ್ಷಿಸುತ್ತಿದ್ದ ವೇಳೆ ‘Prasad Shetty’ ಎಂಬ ಖಾತೆಯಲ್ಲಿ ಈ ವಿಡಿಯೋ ಪ್ರತ್ಯಕ್ಷವಾಗಿದೆ. ಶಾಸಕರ ಚಿತ್ರವನ್ನು ವಿಕೃತವಾಗಿ ಎಡಿಟ್ ಮಾಡಿ, ಕೊಲೆ ಮಾಡುವಂತೆ ಹಾಗೂ ಹೊಡೆಯುವಂತೆ ಸಾರ್ವಜನಿಕರನ್ನು ಪ್ರಚೋದಿಸುವ ರೀತಿಯಲ್ಲಿ ವಿಡಿಯೋ ಸೃಷ್ಟಿಸಲಾಗಿತ್ತು.
ಶಾಂತಿ ಭಂಗದ ಯತ್ನ – ದೂರು ದಾಖಲು:
ಜನರಿಂದ ಆಯ್ಕೆಯಾದ ಜನಪ್ರತಿನಿಧಿಯ ವಿರುದ್ಧ ಇಂತಹ ಪೋಸ್ಟ್ ಹಾಕಿ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಭಂಗ ತರಲು ಯತ್ನಿಸಲಾಗಿದೆ ಎಂದು ವಿಘ್ನೇಶ್ ಪ್ರಸಾದ್ ರಾವ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ದೂರು ಸ್ವೀಕರಿಸಿದ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿ ಪ್ರಸಾದ್ ಶೆಟ್ಟಿಯನ್ನು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.