ಮಂಗಳೂರು, ಆಗಸ್ಟ್ 20 : ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್‌ವೆಲ್‌ನಿಂದ ನಂತೂರು ಕಡೆಗೆ ಹೋಗುವ ಸರ್ವಿಸ್ ರಸ್ತೆಯಲ್ಲಿ ಆಟೋ ರಿಕ್ಷಾದಲ್ಲಿ ನಿಂತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ಪೊಲೀಸರು ಆಗಸ್ಟ್ 18ರಂದು ದಾಳಿ ನಡೆಸಿದ್ದಾರೆ. ಈ ವೇಳೆ ಕೇರಳದ ವರ್ಕಾಡಿ ನಿವಾಸಿ ಮಹಮ್ಮದ್ ಇರ್ಶಾದ್ (30) ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ 1.36 ಲಕ್ಷ ರೂ. ಮೌಲ್ಯದ 13.69 ಗ್ರಾಂ ಎಂಡಿಎಂಎ, ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾ ಸೇರಿದಂತೆ ಒಟ್ಟು 2,94,500 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಆಯುರ್ವೇದ ಚಿಕಿತ್ಸಕನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತನನ್ನು ಕೇರಳದ ಕಣ್ಣೂರು ಮೂಲದ, ಪ್ರಸ್ತುತ ಕೊಂಚಾಡಿ ನಿವಾಸಿ ನಿತಿನ್ ಕೃಷ್ಣನ್ (27) ಎಂದು ಗುರುತಿಸಲಾಗಿದೆ. ಈತ ಕದ್ರಿ ಪದವು ಗ್ರೌಂಡ್ ಬಳಿಯ ಆಯುರ್ವೇದ ಕ್ಲಿನಿಕ್‌ನಲ್ಲಿ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದನು. ಆಗಸ್ಟ್ 17ರಂದು ಗಾಂಜಾ ಸೇವನೆ ಪ್ರಕರಣದಲ್ಲಿ ಸೆರೆಸಿಕ್ಕಿದ್ದ ಅಶ್ವಿನ್ ಕ್ಸೇವಿಯರ್ (24) ನೀಡಿದ ಸುಳಿವಿನ ಮೇರೆಗೆ ಸುರತ್ಕಲ್ ಪೊಲೀಸರು ದಾಳಿ ನಡೆಸಿ ನಿತಿನ್‌ನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 60,000 ರೂ. ಮೌಲ್ಯದ 1.206 ಕೆಜಿ ಗಾಂಜಾ, ಕೆಟಿಎಂ ಬೈಕ್ ಹಾಗೂ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನು ಓದಿ : Belthangady : ಇಂದಬೆಟ್ಟು ನೇತ್ರಾವತಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ; ಖಾಕಿ ದಾಳಿಗೆ ಓರ್ವ ಅರೆಸ್ಟ್, 2 ಟಿಪ್ಪರ್ ಜಪ್ತಿ!