ಬಂಟ್ವಾಳ, ಆಗಸ್ಟ್ 19 : ವಿಟ್ಲದ ಕೊಂಡಗಾಯಿ ನಿವಾಸಿ ಉಮೇಶ್ (53) ಬಂಧಿತ ಆರೋಪಿಯಾಗಿದ್ದಾನೆ. ಆಗಸ್ಟ್ 15ರಂದು ಸಂತ್ರಸ್ತ ಅಪ್ರಾಪ್ತ ಬಾಲಕ ಅಳಿಕೆಯಿಂದ ಪುತ್ತೂರಿಗೆ ತೆರಳುವ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುಷ್ಕೃತ್ಯ ಆರಂಭವಾಗಿದೆ. ಬಸ್ಸು ವಿಟ್ಲದ ಖಾಸಗಿ ಬಸ್ ನಿಲ್ದಾಣಕ್ಕೆ ತಲುಪಿದಾಗ ಬಸ್ ಹತ್ತಿದ ಆರೋಪಿ ಉಮೇಶ್, ಬಾಲಕನ ಪಕ್ಕದಲ್ಲೇ ಕುಳಿತುಕೊಂಡು ಪ್ರಯಾಣದುದ್ದಕ್ಕೂ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಬಾಲಕ ಬಸ್‌ನಿಂದಿಳಿದು ಮನೆಗೆ ತಲುಪಿದ ಬಳಿಕವೂ ಬೆನ್ನಟ್ಟಿಕೊಂಡು ಬಂದ ಕಾಮುಕ, ಬಾಲಕನ ಮನೆಗೇ ನುಗ್ಗಿ ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಸಂತ್ರಸ್ತ ಬಾಲಕ ಹಾಗೂ ಆತನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ವಿಟ್ಲ ಠಾಣಾ ಪೊಲೀಸರು ಪೋಕ್ಸೋ ಕಾಯ್ದೆ 2012 ರ ಕಲಂ 4(2) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 351(2) ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿ ಉಮೇಶ್‌ನನ್ನು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.